ADVERTISEMENT

ಟ್ರಾಯ್ ಹೊಸ ನಿಯಮಾವಳಿ: ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿ ಬಂದ್?

ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ರೂಪಿಸಿರುವ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2024, 6:53 IST
Last Updated 27 ನವೆಂಬರ್ 2024, 6:53 IST
ಕೆನರಾ ಬ್ಯಾಂಕ್‌ ಒಟಿಪಿ
ಕೆನರಾ ಬ್ಯಾಂಕ್‌ ಒಟಿಪಿ   

ಬೆಂಗಳೂರು: ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿ (One Time Password) ಗಳ ಮೂಲವನ್ನು ಪತ್ತೆ ಮಾಡುವ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ರೂಪಿಸಿರುವ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಾಗಿದೆ.

ಒಂದು ವೇಳೆ ಈ ಗಡುವಿನೊಳಗೆ ಟೆಲಿಕಾಂ ಕಂಪನಿಗಳು ಒಪ್ಪಿಗೆ ಸೂಚಿಸದೇ ಹೋದರೆ ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿಗಳು ಬರುವುದಿಲ್ಲ ಎಂದು ವರದಿಯಾಗಿದೆ.

ಡಿಜಿಟಲ್ ಬ್ಯಾಂಕಿಂಗ್, ಆನ್‌ಲೈನ್‌ ಹಣಕಾಸು ವ್ಯವಹಾರಗಳಿಗೆ ಒಟಿಪಿ ತೀರಾ ಅಗತ್ಯವಿದ್ದು ಟ್ರಾಯ್ ಗಡುವು ವಿಸ್ತರಿಸದಿದ್ದರೆ ಈ ಸೇವೆಗಳಲ್ಲಿ ಭಾರಿ ಸಮಸ್ಯೆ ತಲೆದೂರಲಿದೆ ಎಂದು ಇಂಡಿಯಾ ಟಿ.ವಿ ವೆಬ್‌ಸೈಟ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಆನ್‌ಲೈನ್ ಹಣಕಾಸು ವ್ಯವಹಾರದಲ್ಲಿ ಒಟಿಪಿಗಳ ಹೆಸರಿನಲ್ಲಿ ಇತ್ತೀಚೆಗೆ ವಂಚನೆಗಳು ಹೆಚ್ಚುತ್ತಿವೆ. ಹೀಗಾಗಿ ಒಟಿಪಿಗಳ ಮೂಲ ಬಹಿರಂಗಗೊಳಿಸುವ (ಟ್ರ್ಯಾಕಿಂಗ್) ನಿಟ್ಟಿನಲ್ಲಿ ಟ್ರಾಯ್ ಹೊಸ ನಿಯಮಾವಳಿ ರೂಪಿಸಿದ್ದು ಇದಕ್ಕೆ ಜಿಯೊ, ವೊಡಾಫೋನ್, ಏರ್‌ಟೇಲ್, ಬಿಎಸ್‌ಎನ್‌ಎಲ್‌ ಸೇರಿದಂತೆ ಮುಂತಾದ ಟೆಲಿಕಾಂ ಕಂಪನಿಗಳು ಇನ್ನೂ ಒಪ್ಪಿಗೆ ಕೊಟ್ಟಿಲ್ಲ.

ಒಂದು ವೇಳೆ ಗಡುವಿನೊಳಗೆ ಈ ಕಂಪನಿಗಳು ಕ್ರಮ ಕೈಗೊಳ್ಳದಿದ್ದರೆ ಒಟಿಪಿ ಸೇವೆಯಲ್ಲಿ ವ್ಯತ್ಯಯ ಆಗಬಹುದು ಎನ್ನಲಾಗಿದೆ.

ಈ ಹಿಂದೆ ಅಕ್ಟೋಬರ್ 31ರ ಗಡುವು ನೀಡಲಾಗಿತ್ತು. ಆದರೆ, ಟೆಲಿಕಾಂ ಕಂಪನಿಗಳ ಕೋರಿಕೆ ಮೇರೆಗೆ ಗಡುವು (ನ.30ಕ್ಕೆ) ವಿಸ್ತರಿಸಲಾಗಿತ್ತು.

ಟ್ರಾಯ್‌ನ ಹೊಸ ಗಡುವಿನ ಬಗ್ಗೆ ಟೆಲಿಕಾಂ ಕಂಪನಿಗಳು ಯಾವುದೇ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಆ ಕಂಪನಿಗಳು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.