ADVERTISEMENT

ರಾಜಿ ಆಗಲ್ಲ; ಜೆಕೆ ಹೌಸ್‌ಗೆ ಮತ್ತೆ ಕಾಲಿಡಲ್ಲ- ರೇಮಂಡ್‌ ಸಮೂಹದ ಮಾಜಿ ಅಧ್ಯಕ್ಷ

ಪುತ್ರನ ಜೊತೆಗಿನ ಫೋಟೊಗೆ ವಿಜಯಪತ್‌ ಸಿಂಘಾನಿಯಾ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:06 IST
Last Updated 26 ಮಾರ್ಚ್ 2024, 16:06 IST
ಗೌತಮ್‌ ಸಿಂಘಾನಿಯಾ
ಗೌತಮ್‌ ಸಿಂಘಾನಿಯಾ   

ನವದೆಹಲಿ: ‘ನನ್ನ ಪುತ್ರನೊಟ್ಟಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಜೆಕೆ ಹೌಸ್‌ಗೆ ಮತ್ತೆ ಕಾಲಿಡುವುದಿಲ್ಲ’ ಎಂದು ರೇಮಂಡ್‌ ಸಮೂಹದ ಮಾಜಿ ಅಧ್ಯಕ್ಷ ವಿಜಯಪತ್‌ ಸಿಂಘಾನಿಯಾ ಸ್ಪಷ್ಟಪಡಿಸಿದ್ದಾರೆ.

ರೇಮಂಡ್‌ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪುತ್ರ ಗೌತಮ್ ಸಿಂಘಾನಿಯಾ, ಕಳೆದ ವಾರ ತನ್ನ ತಂದೆ ವಿಜಯಪತ್‌ ಅವರನ್ನು ಮನೆಗೆ ಆಹ್ವಾನಿಸಿದ್ದರು. ಈ ವೇಳೆ ಅವರೊಟ್ಟಿಗೆ ತಾನು ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಬಳಿಕ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

‘ನನ್ನಪ್ಪ ಮನೆಗೆ ಬಂದಿದ್ದು, ಅವರ ಆಶೀರ್ವಾದ ‍ಪಡೆದೆ. ಅಪ್ಪ, ನೀವು ಸದಾ ಕಾಲ ಆರೋಗ್ಯದಿಂದ ಇರುವಂತೆ ಹಾರೈಸುತ್ತೇನೆ’ ಎಂದು ಆ ಫೋಟೊಕ್ಕೆ ಗೌತಮ್‌ ನೀಡಿದ್ದ ಶೀರ್ಷಿಕೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಪ್ಪ ಮತ್ತು ಪುತ್ರ ಸಂಘರ್ಷ ಮರೆತು ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ADVERTISEMENT

‘ಮಾರ್ಚ್‌ 20ರಂದು ನನ್ನ ಪುತ್ರನ ಸಹಾಯಕ, ಮನೆಗೆ ಬರುವಂತೆ ಆಹ್ವಾನ ನೀಡಿದ್ದ. ಇದಕ್ಕೆ ನಾನು ನಿರಾಕರಿಸಿದೆ. ಕೊನೆಗೆ, ಮೊಬೈಲ್‌ ಪರದೆಯಲ್ಲಿ ಕಾಣಿಸಿಕೊಂಡ ಪುತ್ರ ಗೌತಮ್, ಮನೆಗೆ ಬಂದು ಕಾಫಿ ಕುಡಿಯುವಂತೆ ಮನವೊಲಿಸಿದ. ಕೊನೆಗೆ, ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ’ ಎಂದು ವಿಜಯಪತ್‌ ಅವರು, ಇಂಡಿಯಾ ಟುಡೆ ಟಿ.ವಿಗೆ ತಿಳಿಸಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

‘ಆ ಬಳಿಕ ನಾನು ಮತ್ತು ಗೌತಮ್‌ ಜೊತೆಗಿರುವ ಫೋಟೊ ಅಂತರ್ಜಾಲದಲ್ಲಿ ಹರಿದಾಡಿದ ಬಗ್ಗೆ ನನಗೆ ಸಂದೇಶಗಳು ಬರಲಾರಂಭಿಸಿದವು. ನಾನು ಆತನೊಟ್ಟಿಗೆ ರಾಜಿ ಮಾಡಿಕೊಂಡಿದ್ದೇನೆ ಎಂಬುದು ಶುದ್ಧ ಸುಳ್ಳು’ ಎಂದು ಸ್ಪಷ್ಟಪಡಿಸಿದ್ದಾರೆ.

‘ನನ್ನನ್ನು ಮನೆಗೆ ಆಹ್ವಾನಿಸಿದ್ದು ಕಾಫಿಗಾಗಿಯೇ ಅಥವಾ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳ ಪರಿಹಾರಕ್ಕಾಗಿಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇದರ ಹಿಂದಿನ ಉದ್ದೇಶವು ಅನುಮಾನದಿಂದ ಕೂಡಿದೆ. ಹತ್ತು ವರ್ಷಗಳ ಬಳಿಕ ನಾನು ಜೆಕೆ ಹೌಸ್‌ ಭೇಟಿ ನೀಡಿದ್ದೆ. ಮತ್ತೆ ಆ ಮನೆಗೆ ಕಾಲಿಡುತ್ತೇನೆಂದು ನಾನು ಯೋಚಿಸಿಲ್ಲ’ ಎಂದು ಹೇಳಿದ್ದಾರೆ.

ವಿಜಯಪತ್‌ ಅವರಿಗೆ ಸದ್ಯ 85 ವರ್ಷ. ಗೌತಮ್‌ ಮತ್ತು ಅವರ ನಡುವಿನ ಬಾಂಧವ್ಯ ಹದಗೆಟ್ಟಿದ್ದರಿಂದ 2015ರಲ್ಲಿ ರೇಮಂಡ್‌ ಸಮೂಹದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಅವರು, ಪುತ್ರನಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. 2018ರಲ್ಲಿ ರೇಮಂಡ್‌ ಸಮೂಹದ ಗೌರವಾಧ್ಯಕ್ಷ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಗಿತ್ತು.

ವಿಜಯಪತ್‌ ಸಿಂಘಾನಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.