ADVERTISEMENT

ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಇ–ವೇ ಬಿಲ್‌ ಬಳಸಲು ನಿಷೇಧ

ಜೂನ್‌ 21ರಿಂದ ಜಾರಿಗೆ ತರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:13 IST
Last Updated 24 ಏಪ್ರಿಲ್ 2019, 19:13 IST
   

ನವದೆಹಲಿ (ಪಿಟಿಐ): ಸತತ ಎರಡು ತಿಂಗಳ ಕಾಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್‌ ಸಲ್ಲಿಸದ ವಹಿವಾಟುದಾರರು ಇ–ವೇ ಬಿಲ್‌ ಪಡೆಯುವುದನ್ನು ನಿರ್ಬಂಧಿಸುವ ನಿಯಮ ಜೂನ್‌ 21ರಿಂದ ಜಾರಿಗೆ ಬರಲಿದೆ.

ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ಆಯ್ಕೆ ಮಾಡಿಕೊಂಡ ವಹಿವಾಟುದಾರರು ಸತತ ಎರಡು ಅವಧಿಯ ಅಂದರೆ 6 ತಿಂಗಳಲ್ಲಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಅವರಿಗೂ ಈ ನಿರ್ಬಂಧ ಅನ್ವಯವಾಗಲಿದೆ.

ಇ–ಕಾಮರ್ಸ್‌ ವಹಿವಾಟುದಾರರು, ಸರಕು ಸಾಗಿಸುವವರು, ಅಥವಾ ಕೊರಿಯರ್‌ ಏಜೆನ್ಸಿಗಳು ಜಿಎಸ್‌ಟಿ ನಿಯಮಗಳಡಿ ನಿಗದಿಪಡಿಸಿದ ಅವಧಿಯಲ್ಲಿ ಜಿಎಸ್‌ಟಿ ಸಲ್ಲಿಸದಿದ್ದರೆ ಇ–ವೇ ಬಿಲ್‌ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಜೂನ್‌ 21ರಿಂದ ಜಾರಿಗೆ ಬರಲಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ.

ADVERTISEMENT

ಜಿಎಸ್‌ಟಿ ವ್ಯವಸ್ಥೆಯಡಿ, ವಹಿವಾಟುದಾರರು ಪ್ರತಿ ತಿಂಗಳ ರಿಟರ್ನ್ಸ್‌ ಅನ್ನು ನಂತರದ ತಿಂಗಳ 20ರಂದು ಸಲ್ಲಿಸಬೇಕಾಗುತ್ತದೆ. ರಾಜಿ ತೆರಿಗೆ ಆಯ್ಕೆ ಮಾಡಿಕೊಂಡವರು ಪ್ರತಿ ಮೂರು ತಿಂಗಳ ನಂತರ 18ನೆ ದಿನ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ.

ನಿಗದಿತ ಸಮಯದಲ್ಲಿ ರಿಟರ್ನ್ಸ್‌ ಸಲ್ಲಿಸದವರ ಇ–ವೇ ಬಿಲ್‌ ಸಿದ್ಧವಾಗದಂತೆ, ಈ ತೆರಿಗೆ ವ್ಯವಸ್ಥೆಯ ಬೆನ್ನೆಲುಬು ಆಗಿರುವ ‘ಜಿಎಸ್‌ಟಿಎನ್‌’ ಜಾಲದಲ್ಲಿ ಸೂಕ್ತ ಬದಲಾವಣೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜಿಎಸ್‌ಟಿ ಪಾವತಿಸುವುದನ್ನು ತಪ್ಪಿಸುವ ಪ್ರವೃತ್ತಿಗೆ ಈ ಹೊಸ ನಿರ್ಬಂಧವು ಕಡಿವಾಣ ಹಾಕಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.