ADVERTISEMENT

2021ರ ಮೊದಲಾರ್ಧದಲ್ಲಿ ವಸೂಲಾಗದ ಸಾಲ ಹೆಚ್ಚಳ ನಿರೀಕ್ಷೆ

ಪಿಟಿಐ
Published 17 ಮಾರ್ಚ್ 2021, 16:01 IST
Last Updated 17 ಮಾರ್ಚ್ 2021, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು 2020ರ ದ್ವಿತೀಯಾರ್ಧದಲ್ಲಿ ಸುಧಾರಿಸಿದ್ದರೂ, ಅದು 2021ರ ಮೊದಲ ಆರು ತಿಂಗಳಲ್ಲಿ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಎಫ್‌ಐಸಿಸಿಐ ಮತ್ತು ಐಬಿಎ ನಡೆಸಿರುವ ಜಂಟಿ ಸಮೀಕ್ಷೆ ಹೇಳಿದೆ.

2020ರ ಜುಲೈ–ಡಿಸೆಂಬರ್‌ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ. ಸರ್ಕಾರಿ, ಖಾಸಗಿ ಮತ್ತು ವಿದೇಶಿ ಬ್ಯಾಂಕ್‌ಗಳನ್ನೂ ಒಳಗೊಂಡು ಒಟ್ಟಾರೆ 20 ಬ್ಯಾಂಕ್‌ಗಳ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ.

ಅಭಿಪ್ರಾಯ ನೀಡಿರುವ ಬ್ಯಾಂಕ್‌ಗಳ ಪೈಕಿ ಶೇಕಡ 68ರಷ್ಟು ಬ್ಯಾಂಕ್‌ಗಳು ‘2021ರ ಮೊದಲಾರ್ಧದಲ್ಲಿ ಬ್ಯಾಂಕ್‌ಗಳ ಎನ್‌ಪಿಎ ಶೇ 10ಕ್ಕಿಂತ ಅಧಿಕ ಮಟ್ಟದಲ್ಲಿ ಇರಲಿದೆ’ ಎಂದು ಹೇಳಿವೆ. ಎನ್‌ಪಿಎ ಪ್ರಮಾಣ ಶೇ 12ನ್ನೂ ಮೀರಲಿದೆ ಎಂದು ಶೇ 37ರಷ್ಟು ಬ್ಯಾಂಕ್‌ಗಳು ಹೇಳಿವೆ.

ADVERTISEMENT

ಪ್ರವಾಸ ಮತ್ತು ಆತಿಥ್ಯ, ಎಂಎಸ್‌ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆಗಳು), ವಿಮಾನಯಾನ ಮತ್ತು ರೆಸ್ಟೋರೆಂಟ್‌ ವಲಯಗಳ ಎನ್‌ಪಿಎ ಪ್ರಮಾಣವು ಗರಿಷ್ಠವಾಗಿ ಇರಲಿದೆ ಎಂದು ಬ್ಯಾಂಕ್‌ಗಳು ಅಂದಾಜು ಮಾಡಿವೆ.

ಆರ್‌ಬಿಐ ಜನವರಿಯಲ್ಲಿ ಬಿಡುಗಡೆ ಮಾಡಿರುವ ಹಣಕಾಸು ಸ್ಥಿರತೆ ವರದಿಯ ಪ್ರಕಾರ 2021ರ ಸೆಪ್ಟೆಂಬರ್‌ ವೇಳೆಗೆ ಸರಾಸರಿ ಎನ್‌ಪಿಎ ಶೇ 13.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ಎಂಎಸ್‌ಎಂಇ ವಲಯಕ್ಕೆ ಒಂದು ಬಾರಿ ಸಾಲ ಮರುಹೊಂದಾಣಿಕೆಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯು ತೀವ್ರವಾಗಲಿದೆ. ಮೂಲಸೌಕರ್ಯ, ಔಷಧ ಮತ್ತು ಆಹಾರ ಸಂಸ್ಕರಣಾ ವಲಯಗಳುದೀರ್ಘಾವಧಿಯ ಸಾಲಕ್ಕಾಗಿ ಹೆಚ್ಚು ಬೇಡಿಕೆ ಇಡುತ್ತಿವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.