ADVERTISEMENT

ರಾಷ್ಟ್ರೀಯ ಪಿಂಚಣಿ ಯೋಜನೆ‌: ತೆರಿಗೆ ವಿನಾಯಿತಿ ಎಲ್ಲರಿಗೂ ವಿಸ್ತರಣೆ?

ಪಿಟಿಐ
Published 15 ನವೆಂಬರ್ 2020, 14:29 IST
Last Updated 15 ನವೆಂಬರ್ 2020, 14:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ಅಡಿಯಲ್ಲಿ, ಉದ್ಯೋಗದಾತರು ನೀಡುವ ಶೇಕಡ 14ರಷ್ಟು ಮೊತ್ತವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಪಿಂಚಣಿ ನಿಧಿ ನಿರ್ವಹಣೆ ಮಾಡುತ್ತಿರುವ ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್‌ಆರ್‌ಡಿಎ) ಹೇಳಿದೆ.

ಎನ್‌ಪಿಎಸ್‌ ಅಡಿಯಲ್ಲಿ ಉದ್ಯೋಗದಾತರು ನೀಡುವ ಶೇಕಡ 14ರಷ್ಟು ಮೊತ್ತಕ್ಕೆ ತೆರಿಗೆ ಇಲ್ಲ ಎಂಬ ನಿಯಮವನ್ನು 2019ರ ಏಪ್ರಿಲ್‌ 1ರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಜಾರಿಗೆ ತರಲಾಗಿದೆ. ‘ಈ ನಿಯಮ ಎಲ್ಲರಿಗೂ ಅನ್ವಯ ಆಗಬೇಕು ಎಂಬ ಪ್ರಸ್ತಾವ ಸಲ್ಲಿಸಲಿದ್ದೇವೆ’ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರೀತಂ ಬಂದ್ಯೋಪಾಧ್ಯಾಯ ಹೇಳಿದರು.

ಶೇಕಡ 14ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಕೊಡುವುದನ್ನು ತಮ್ಮ ನೌಕರರಿಗೂ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಗಳು ಆಗ್ರಹಿಸುತ್ತಿವೆ. ಈ ಬಗ್ಗೆ ಕೆಲವು ರಾಜ್ಯ ಸರ್ಕಾರಗಳು ಲಿಖಿತ ಮನವಿ ಸಲ್ಲಿಸಿವೆ ಎಂದು ಅವರು ತಿಳಿಸಿದರು.

ADVERTISEMENT

ಎನ್‌ಪಿಎಸ್‌ನ ಟಯರ್‌–2 ಖಾತೆಯಲ್ಲಿ ಇರಿಸುವ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡುವುದನ್ನು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮಾತ್ರವಲ್ಲದೆ, ಇತರರಿಗೂ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಕೂಡ ಕೇಂದ್ರದ ಮುಂದಿರಿಸಲಾಗುವುದು ಎಂದರು. ‘ತೆರಿಗೆ ವಿನಾಯಿತಿ ದೊರೆತರೆ, ಟಯರ್–2 ಖಾತೆಯಲ್ಲಿ ಇರಿಸುವ ಮೊತ್ತವನ್ನು ಮೂರು ವರ್ಷಗಳವರೆಗೆ ಹಿಂದಕ್ಕೆ ಪಡೆಯಲು ಸಾಧ್ಯವಾಗದಂತೆ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದರು.

ಎನ್‌ಪಿಎಸ್‌ ಅಡಿ ಟಯರ್–2 ಖಾತೆಯನ್ನು ತೆರೆಯುವುದು ಕಡ್ಡಾಯವಲ್ಲ. ಈಗಿರುವ ವ್ಯವಸ್ಥೆಯಲ್ಲಿ ಟಯರ್–2 ಖಾತೆಯಲ್ಲಿ ಇರುವ ಮೊತ್ತವನ್ನು ಯಾವಾಗ ಬೇಕಿದ್ದರೂ ಹಿಂದಕ್ಕೆ ಪಡೆಯಬಹುದು. ಟಯರ್–1 ಖಾತೆಯಲ್ಲಿರುವ ಮೊತ್ತವನ್ನು ಹಿಂದಕ್ಕೆ ಪಡೆಯಲಾಗದು. ಟಯರ್–1 ಖಾತೆ ಹೊಂದಿರುವವರಿಗೆ ಮಾತ್ರ ಟಯರ್–2 ಖಾತೆ ತೆರೆಯಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.