ADVERTISEMENT

ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್ ಆರಂಭಕ್ಕೆ ಸೆಬಿ ಒಪ್ಪಿಗೆ: ಎನ್‌ಎಸ್‌ಇ

ಪಿಟಿಐ
Published 23 ಫೆಬ್ರುವರಿ 2023, 11:09 IST
Last Updated 23 ಫೆಬ್ರುವರಿ 2023, 11:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸಾಮಾಜಿಕ ಅಭಿವೃದ್ಧಿ ಉದ್ದೇಶದ ಉದ್ದಿಮೆಗಳಿಗೆ ಬಂಡವಾಳ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್’ (ಎಸ್‌ಎಸ್‌ಇ) ಆರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅಂತಿಮ ಒಪ್ಪಿಗೆ ನೀಡಿದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ತಿಳಿಸಿದೆ.

ಬುಧವಾರ ಅಂತಿಮ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದು ವಿನಿಮಯ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಈಗಿರುವ ಷೇರು ಮಾರುಕಟ್ಟೆಗಳ ಪ್ರತ್ಯೇಕ ಭಾಗವಾಗಿ ಎಸ್‌ಎಸ್‌ಇ ಕೆಲಸ ಮಾಡಲಿದೆ. ಲಾಭದ ಉದ್ದೇಶವಿಲ್ಲದ ಸಂಸ್ಥೆಗಳು (ಎನ್‌ಪಿಒ) ಹಾಗೂ ಲಾಭದ ಉದ್ದೇಶವಿದ್ದರೂ ಸಾಮಾಜಿಕ ಪರಿಣಾಮ ಬೀರುವಂತಹ ಕೆಲಸ ಮಾಡುವ ಉದ್ದಿಮೆಗಳು ಎಸ್‌ಎಸ್‌ಇ ಮೂಲಕ ಬಂಡವಾಳ ಸಂಗ್ರಹಿಸಬಹುದು.

ADVERTISEMENT

ಎನ್‌ಪಿಒಗಳು ಮೊದಲಿಗೆ ಎಸ್‌ಎಸ್‌ಇಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರ್ಹ ಎನ್‌ಪಿಒಗಳು ಈಕ್ವಿಟಿ, ಮ್ಯೂಚುವಲ್‌ ಫಂಡ್, ಸಾಮಾಜಿಕ ಪರಿಣಾಮ ಬೀರುವ ಫಂಡ್, ಅಭಿವೃದ್ಧಿ ಬಾಂಡ್‌ಗಳ ಮೂಲಕ ಬಂಡವಾಳ ಸಂಗ್ರಹಿಸಲು ಅವಕಾಶವಿದೆ. ಜೀರೊ ಕೂಪನ್‌ ಜಿರೊ ಪ್ರಿನ್ಸಿಪಲ್ (ಜೆಡ್‌ಸಿಜೆಡ್‌ಪಿ) ತರಹದ ಬಾಂಡ್‌ಗಳನ್ನು ವಿತರಿಸುವ ಮೂಲಕ ಬಂಡವಾಳ ಎನ್‌ಪಿಒಗಳು ಸಂಗ್ರಹಿಸಬಹುದಾಗಿದೆ.

‘ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್’ ಕುರಿತು ಉದ್ದಿಮೆಗಳಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಎನ್‌ಎಸ್‌ಇ ಸಿಇಒ ಆಶಿಶ್‌ಕುಮಾರ್ ಚೌಹಾಣ್‌ ಹೇಳಿದ್ದಾರೆ.

ಎಸ್‌ಎಸ್‌ಇ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು, ಅದರಲ್ಲಿ ನೋಂದಣಿ ಆಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಎನ್‌ಎಸ್ಇ ಜೊತೆ ಸಂಪರ್ಕದಲ್ಲಿ ಇರುವಂತೆ ಉದ್ದಿಮೆಗಳಿಗೆ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.