ADVERTISEMENT

₹ 68 ಸಾವಿರ ಕೋಟಿ ವಸೂಲಿ

ದಿವಾಳಿ ಸಂಹಿತೆ ಕಾಯ್ದೆಯಡಿ ಫಲ ನೀಡಿದ ಕ್ರಮ

ಪಿಟಿಐ
Published 14 ಏಪ್ರಿಲ್ 2019, 20:01 IST
Last Updated 14 ಏಪ್ರಿಲ್ 2019, 20:01 IST
   

ನವದೆಹಲಿ: ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿರುವ 88 ಉದ್ದಿಮೆಗಳಿಂದ ಬರಬೇಕಾಗಿದ್ದ ₹ 1.42 ಲಕ್ಷ ಕೋಟಿಯಲ್ಲಿ ಅರ್ಧದಷ್ಟು ಮೊತ್ತವನ್ನು ದಿವಾಳಿ ಸಂಹಿತೆ (ಐಬಿಸಿ) ಕಾಯ್ದೆಯಡಿ ವಸೂಲಿ ಮಾಡುವಲ್ಲಿ ಸಾಲಗಾರರು ಯಶಸ್ವಿಯಾಗಿದ್ದಾರೆ.

ಹಣಕಾಸು ನಷ್ಟಕ್ಕೆ ಗುರಿಯಾಗಿ ಸಾಲ ಮರುಪಾವತಿ ಮಾಡದ ಕಂಪನಿಗಳಿಂದ ನಿಗದಿತ ಕಾಲಮಿತಿಯಲ್ಲಿ ಹಣ ವಸೂಲಿ ಮಾಡಲು ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯು ಅವಕಾಶ ಮಾಡಿಕೊಟ್ಟಿದೆ.

ಈ ವರ್ಷದ ಫೆಬ್ರುವರಿ 28ರವರೆಗೆ ‘ಐಬಿಸಿ’ಯಡಿ ದಾಖಲಾಗಿರುವ 88 ಪ್ರಕರಣಗಳಲ್ಲಿ ಬ್ಯಾಂಕ್‌ಗಳು ಮತ್ತು ಉದ್ದಿಮೆಗಳಿಗೆ ಸರಕು ಹಾಗೂ ಸೇವೆ ಒದಗಿಸಿದ ಸಂಸ್ಥೆಗಳಿಗೆ ಬರಬೇಕಾದ ಮೊತ್ತವು ₹ 1.42 ಲಕ್ಷ ಕೋಟಿ ಇದೆ ಎಂದು ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿಯು (ಐಬಿಬಿಐ) ತಿಳಿಸಿದೆ.

ADVERTISEMENT

ದಾಖಲಾಗಿರುವ ಪ್ರಕರಣಗಳ ಪೈಕಿ ಸಾಲಗಾರರ ಶೇ 48ರಷ್ಟು ಸಾಲ ವಸೂಲಿ ಸಾಧ್ಯವಾಗಿದೆ. ಈ ಮೂಲಕ ₹ 68,766 ಕೋಟಿ ವಸೂಲಾಗಿದೆ. ಕೆಲ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದ ವಸೂಲಾತಿಯೂ ಸಾಧ್ಯವಾಗಿದೆ. ದಿವಾಳಿ ಸಂಹಿತೆ ಕಾಯ್ದೆಯಡಿ ಸ್ಥಾಪಿಸಿ
ರುವ ‘ಐಬಿಬಿಐ’, ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಗೆ (ಎನ್‌ಸಿಎಲ್‌ಎಟಿ) ಈ ಮಾಹಿತಿ ಒದಗಿಸಿದೆ.

ಎಸ್ಸಾರ್‌ ಸ್ಟೀಲ್‌ನ ಬಿಕ್ಕಟ್ಟು ಪರಿಹಾರ ಪ್ರಕ್ರಿಯೆ ಕುರಿತು ಮಾಹಿತಿ ಒದಗಿಸಲು ‘ಎನ್‌ಸಿಎಲ್‌ಎಟಿ’ಯು ‘ಐಬಿಬಿಐ’ಗೆ ಸೂಚಿಸಿತ್ತು. ಸಾಲಗಾರರ ಸಮಿತಿ (ಸಿಒಸಿ) ಅನುಮೋದಿಸಿರುವ ಯೋಜನೆಗೆ ಹಣಕಾಸು ಸಂಸ್ಥೆಗಳು ಮತ್ತು ಸರಕು ಹಾಗೂ ಸೇವೆ ಒದಗಿಸಿರುವವರಿಂದ ವಿರೋಧ ವ್ಯಕ್ತವಾಗಿದೆ.

ಅಂಕಿಅಂಶ

88: ದಿವಾಳಿ ಸಂಹಿತೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ

₹ 1.42 ಲಕ್ಷ ಕೋಟಿ: ವಸೂಲಾಗಬೇಕಾಗಿರುವ ಒಟ್ಟಾರೆ ಸಾಲದ ಪ್ರಮಾಣ

₹ 68,766 ಕೋಟಿ: ಇದುವರೆಗೆ ವಸೂಲಾಗಿರುವ ಸಾಲದ ಮೊತ್ತ

11 ಪ್ರಕರಣಗಳಲ್ಲಿ ಶೇ 100 ರಷ್ಟು ವಸೂಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.