ನವದೆಹಲಿ: ಕೊಳವೆ ಮೂಲಕ ಮನೆಗಳಿಗೆ ಅಡುಗೆ ಉದ್ದೇಶಕ್ಕೆ ಪೂರೈಕೆ ಮಾಡುವ ನೈಸರ್ಗಿಕ ಅನಿಲಕ್ಕೆ ಏಕರೂಪದ ದರ ನಿಗದಿ ಮಾಡಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು (ಪಿಎನ್‌ಜಿಆರ್‌ಬಿ) ಕಂಪನಿಗಳಿಗೆ ಆದೇಶಿಸಿದೆ.
ಮನೆಗಳಲ್ಲಿ ನೈಸರ್ಗಿಕ ಅನಿಲದ ಬಳಕೆ ಮಟ್ಟವು ಯಾವುದೇ ಪ್ರಮಾಣದಲ್ಲಿ ಇದ್ದರೂ ದರ ನಿಗದಿ ವ್ಯವಸ್ಥೆಯು ಏಕರೂಪಿ ಆಗಿರಬೇಕು ಎಂದು ಮಂಡಳಿಯು ತಾಕೀತು ಮಾಡಿದೆ. ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ನೈಸರ್ಗಿಕ ಅನಿಲ ಬಳಕೆ ಮಾಡುವ ಕುಟುಂಬಗಳಿಗೆ ಹೆಚ್ಚು ದರ ವಿಧಿಸುವ ಕಂಪನಿಗಳ ಪ್ರವೃತ್ತಿಗೆ ಈ ಮೂಲಕ ಮೂಗುದಾರ ಹಾಕಲು ಮಂಡಳಿಯು ಮುಂದಾಗಿದೆ.
ಕೇಂದ್ರ ಸರ್ಕಾರವು ಕಂಪನಿಗಳಿಗೆ ನೈಸರ್ಗಿಕ ಅನಿಲವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಹಂಚಿಕೆ ಮಾಡುತ್ತದೆ. ಇದನ್ನು ಕಂಪನಿಗಳು ಮನೆಗಳಿಗೆ ಕೊಳವೆ ಮೂಲಕ ಪೂರೈಕೆ ಮಾಡುತ್ತವೆ. ಸರ್ಕಾರವು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಅನಿಲ ಪೂರೈಸುತ್ತದೆಯಾದ ಕಾರಣಕ್ಕೆ, ಕಂಪನಿಗಳು ಕೂಡ ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂಬ ನಿರೀಕ್ಷೆ ಇರುತ್ತದೆ.
ಮನೆಗಳಿಗೆ ಪೂರೈಸುವ ಅನಿಲದ ಬೆಲೆಯು ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುತ್ತದೆ. ಹೋಟೆಲ್‌ಗಳಂತಹ ವಾಣಿಜ್ಯ ಕೇಂದ್ರಗಳಿಗೆ ಪೂರೈಸುವ ಅನಿಲದ ಬೆಲೆಯನ್ನು ಮಾರುಕಟ್ಟೆ ಬೆಲೆಯ ಮಟ್ಟದಲ್ಲಿ ನಿಗದಿ ಮಾಡಲಾಗುತ್ತದೆ.
ಆದರೆ ನಗರಗಳಲ್ಲಿ ಕೊಳವೆ ಮೂಲಕ ಅನಿಲ ಪೂರೈಸುವ ಕೆಲವು ಸಂಸ್ಥೆಗಳು ಮನೆಬಳಕೆಯ ಗ್ರಾಹಕರಿಗೆ ಬೇರೆ ರೀತಿಯಲ್ಲಿ ಶುಲ್ಕ ನಿಗದಿ ಮಾಡುತ್ತಿವೆ. ಮೊದಲೇ ನಿಗದಿ ಮಾಡಿರುವ ಮಟ್ಟವನ್ನು ದಾಟಿದ ನಂತರದಲ್ಲಿ ಪ್ರತಿ ಯೂನಿಟ್‌ನ (ಎಸ್‌ಸಿಎಂ ಅಂದರೆ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಅನ್ನು ಯೂನಿಟ್ ಎಂದು ಪರಿಗಣಿಸಲಾಗುತ್ತದೆ) ಶುಲ್ಕವು ಹೆಚ್ಚಳ ಆಗುತ್ತದೆ ಎಂದು ಪಿಎನ್‌ಜಿಆರ್‌ಬಿ ಹೇಳಿದೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಅದು ಹೇಳಿದೆ.
‘ಇಂತಹ ಬೆಲೆ ನಿಗದಿ ಪದ್ಧತಿಯು ಸಬ್ಸಿಡಿ ಇರುವ ಅನಿಲವನ್ನು ವಾಣಿಜ್ಯ ಬಳಕೆದಾರರು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡಬಹುದು’ ಎಂದು ಅದು ಎಚ್ಚರಿಸಿದೆ. ಆದರೆ ಯಾವ ಕಂಪನಿಗಳು ಈ ಬಗೆಯಲ್ಲಿ ಶುಲ್ಕ ನಿಗದಿ ಮಾಡುತ್ತಿವೆ ಎಂಬುದನ್ನು ಮಂಡಳಿಯು ಹೆಸರಿಸಿಲ್ಲ.
ಮನೆಬಳಕೆಗೆ ನೈಸರ್ಗಿಕ ಅನಿಲ ಸಂಪರ್ಕ ಹೊಂದಿರುವ ಎಲ್ಲರಿಗೂ, ಅವರ ಬಳಕೆ ಪ್ರಮಾಣ ಯಾವುದೇ ಇದ್ದರೂ, ಏಕರೂಪಿ ಶುಲ್ಕ ವ್ಯವಸ್ಥೆ ಇರಬೇಕು ಎಂದು ಮಂಡಳಿಯು ಸೂಚನೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.