ನವದೆಹಲಿ : ದೇಶದಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ವಿಲೀನ ಪ್ರಕ್ರಿಯೆಗೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದ್ದು, ಮೇ 1ರಿಂದ ‘ಒಂದು ರಾಜ್ಯ; ಒಂದು ಆರ್‌ಆರ್‌ಬಿ’ ತತ್ವ ಅನುಷ್ಠಾನಕ್ಕೆ ಬರಲಿದೆ.
ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಇರುವ 15 ಆರ್‌ಆರ್‌ಬಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಸದ್ಯ 43 ಇರುವ ಇವುಗಳ ಸಂಖ್ಯೆಯು 28ಕ್ಕೆ ಇಳಿಯಲಿದೆ. ಬ್ಯಾಂಕ್‌ಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ವೆಚ್ಚ ಕಡಿತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಹೇಳಿದೆ.
ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿರುವ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆರ್‌ಆರ್‌ಬಿ ಕಾಯ್ದೆ 1976ರ ಸೆಕ್ಷನ್ 23ಎ (1) ಅಡಿ ಇರುವ ಅಧಿಕಾರ ಬಳಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಉದಾಹರಣೆಗೆ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್, ಆಂಧ್ರಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್‌ಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕ ಬ್ಯಾಂಕ್‌ಗಳಾಗಿವೆ. ಈ ಎಲ್ಲಾ ಬ್ಯಾಂಕ್‌ಗಳನ್ನು ಒಟ್ಟುಗೂಡಿಸಿ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ಎಂದು ನಾಮಕರಣ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಎರಡು ಗ್ರಾಮೀಣ ಬ್ಯಾಂಕ್‌ಗಳಿದ್ದು, ಇವುಗಳನ್ನು ಒಂದು ಬ್ಯಾಂಕ್ ಆಗಿ ವಿಲೀನಗೊಳಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.