ADVERTISEMENT

ದೆಹಲಿಯಲ್ಲಿ ಈರುಳ್ಳಿ ಕೆ.ಜಿಗೆ ₹ 70; ರಾಜ್ಯದಲ್ಲಿ ₹50ರ ಗಡಿ ದಾಟಿದೆ

ದಾಸ್ತಾನು ಮಿತಿ ಹೇರಲು ಕೇಂದ್ರದ ಚಿಂತನೆ

ಪಿಟಿಐ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST
   

ನವದೆಹಲಿ: ದೆಹಲಿಯಲ್ಲಿ ಈರುಳ್ಳಿ ಧಾರಣೆ ಏರುಗತ್ತಿಯಲ್ಲಿದ್ದು ಪ್ರತಿ ಕೆ.ಜಿಗೆ ₹ 70 ರಿಂದ ₹ 80ರಂತೆ ಮಾರಾಟವಾಗುತ್ತಿದೆ. ಹೀಗಾಗಿ ದಾಸ್ತಾನು ಮಿತಿ ಹೇರುವ ಮೂಲಕ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದಾದ್ಯಂತ ಈರುಳ್ಳಿ ಚಿಲ್ಲರೆ ಮಾರಾಟ ದರ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ದೆಹಲಿಯಲ್ಲಿ ಕಳೆದ ವಾರ ಕೆ.ಜಿಗೆ ₹ 57 ಇತ್ತು. ಈ ವಾರ ₹ 70–80ಕ್ಕೆ ಏರಿದೆ. ಎರಡು ಮೂರು ದಿನಗಳಲ್ಲಿ ಬೆಲೆಯಲ್ಲಿ ಸ್ಥಿರತೆ ಮೂಡದೇ ಇದ್ದರೆ ಸರ್ಕಾರ ದಾಸ್ತಾನು ಮಿತಿ ಹೇರಲಿದೆ ಎಂದು ಮೂಲಗಳು ತಿಳಿಸಿವೆ.

ಪೂರೈಕೆ ಹೆಚ್ಚಿಸುವ ಮೂಲಕ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಕೇಂದ್ರದ ಬಳಿ
₹ 56 ಸಾವಿರ ಟನ್‌ಗಳಷ್ಟು ಹೆಚ್ಚುವರಿ ದಾಸ್ತಾನು ಇದ್ದು, ಇದುವರೆಗೆ 16 ಸಾವಿರ ಟನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ದಿನಕ್ಕೆ 200 ಟನ್‌ ಪೂರೈಸಲಾಗುತ್ತಿದೆ.

ಸದ್ಯ, ದಾಸ್ತಾನು ಮಾಡಿಟ್ಟುಕೊಂಡಿರುವ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ.ನವೆಂಬರ್‌ನಿಂದ ಮುಂಗಾರು ಬೆಳೆ ಮಾರುಕಟ್ಟೆಗೆ ಬರಲಿದ್ದು, ಬೆಲೆ ಕಡಿಮೆ ಆಗುವ ನಿರೀಕ್ಷೆ ಮಾಡಲಾಗಿದೆ.

ಈರುಳ್ಳಿ ರಫ್ತಿಗೆ ಕಡಿವಾಣ ಹಾಕಿ, ಹೆಚ್ಚುತ್ತಿರುವ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್‌ಗೆ
₹ 59,500ರಂತೆ ಹೆಚ್ಚಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಈಪರಿಸ್ಥಿತಿಯ ಲಾಭ ಪಡೆದುಕೊಂಡು ಈರುಳ್ಳಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.

2018–19ರ ಬೆಳೆ ವರ್ಷದಲ್ಲಿ ಈರುಳ್ಳಿ ಉತ್ಪಾದನೆ ಕಳೆದ ವರ್ಷದಷ್ಟೆ ಅಂದರೆ 2.32 ಕೋಟಿ ಟನ್‌ಗಳಷ್ಟಿರಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.