ನವದೆಹಲಿ: ದೇಶದ ವಿವಿಧೆಡೆಗಳಲ್ಲಿ ಇರುವ 700ಕ್ಕೂ ಹೆಚ್ಚಿನ ಬ್ಯಾಂಕ್ ಶಾಖೆಗಳಲ್ಲಿ, ಅಕ್ರಮವಾಗಿ ಗಳಿಸಿದ ಹಣದ ವಹಿವಾಟಿಗೆ ಒಟ್ಟು 8.50 ಲಕ್ಷ ಖಾತೆಗಳನ್ನು ತೆರೆಯಲಾಗಿದೆ ಎಂಬುದನ್ನು ಸಿಬಿಐ ಪತ್ತೆ ಮಾಡಿದೆ.
ಡಿಜಿಟಲ್ ಕಳ್ಳತನ, ಹೂಡಿಕೆ ವಂಚನೆ, ಯುಪಿಐ ಆಧಾರಿತ ವಂಚನೆಗಳ ಮೂಲಕ ಗಳಿಸುವ ಹಣವನ್ನು ವರ್ಗಾವಣೆ ಮಾಡಲು ಸೈಬರ್ ಅಪರಾಧಿಗಳು ಈ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಬಿಐ ಹೇಳಿದೆ.
ಸಂತ್ರಸ್ತರ ಖಾತೆಗಳಿಂದ ಹಣ ಸೆಳೆಯುವ ಉದ್ದೇಶದಿಂದ ಅಪರಾಧಿಗಳು ಈ ಖಾತೆಗಳನ್ನು ನಕಲಿ ಗುರುತಿನ ಚೀಟಿ ನೀಡಿ ತೆರೆದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ 42 ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಈ ಖಾತೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಒಂಬತ್ತು ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆಘಾತಕಾರಿ ಸಂಗತಿ ಎಂದರೆ, ಈ ಖಾತೆಗಳನ್ನು ತೆರೆಯಲು ಬ್ಯಾಂಕ್ ಅಧಿಕಾರಿಗಳು, ಇ–ಮಿತ್ರ ಏಜೆಂಟರು ಕೂಡ ಅಪರಾಧಿಗಳ ಜೊತೆ ಕೈಜೋಡಿಸಿರುವ ಸಾಧ್ಯತೆ ಇದೆ ಎಂಬುದು ಸಿಬಿಐ ನಡೆಸಿರುವ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
‘ಇಂತಹ ಖಾತೆಗಳನ್ನು ಬಹುತೇಕ ಪ್ರಕರಣಗಳಲ್ಲಿ ಒಂದು ಬಾರಿಗೆ ಮಾತ್ರವೇ ಬಳಕೆ ಮಾಡಲಾಗುತ್ತಿತ್ತು. ಈ ಖಾತೆಗೆ ಒಮ್ಮೆ ಹಣ ಬಂದ ನಂತರ, ಅದನ್ನು ಬೇರೆ ಬೇರೆ ಖಾತೆಗಳಿಗೆ ಹಂಚಲಾಗುತ್ತಿತ್ತು. ನಂತರ ಮೂಲ ಖಾತೆಯನ್ನು ಮುಚ್ಚಲಾಗುತ್ತಿತ್ತು. ಹೀಗಾಗಿ ಅಪರಾಧಿಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಕೆವೈಸಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆಯೇ ಖಾತೆಗಳನ್ನು ತೆರೆಯಲಾಗಿದೆ. ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸುವಲ್ಲಿ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳ ಮುಖ್ಯಸ್ಥರು ಕೂಡ ವಿಫಲರಾಗಿದ್ದಾರೆ’ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.