ADVERTISEMENT

ಅಕ್ಟೋಬರ್‌ಗೆ ವಿದೇಶಿ ಬಾಂಡ್‌?

ಮೂಲಸೌಕರ್ಯ ವಲಯಕ್ಕೆ ₹ 70 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:45 IST
Last Updated 24 ಜುಲೈ 2019, 19:45 IST

ನವದೆಹಲಿ: ಬಜೆಟ್‌ನಲ್ಲಿ ಘೋಷಿಸಿದಂತೆ ವಿದೇಶಿ ಕರೆನ್ಸಿ ರೂಪದಲ್ಲಿ ಅಕ್ಟೋಬರ್‌ನಲ್ಲಿ ಬಾಂಡ್‌ಗಳ ಮೂಲಕ ₹ 70 ಸಾವಿರ ಕೋಟಿ ಮೊತ್ತದ ಬಾಹ್ಯ ವಿದೇಶಿ ಸಾಲ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ.

ವಿತ್ತೀಯ ಕೊರತೆ ಗುರಿ ತಲುಪಲು ವಿದೇಶಿ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಸರ್ಕಾರ ಇದೇ ಮೊದಲ ಬಾರಿಗೆ ವಿದೇಶಿ ಮಾರುಕಟ್ಟೆಗೆ ಬಾಂಡ್‌ ಬಿಡುಗಡೆ ಮಾಡಲಿದೆ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.3ರಷ್ಟಕ್ಕೆ ಇಳಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಈ ವಿದೇಶಿ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ADVERTISEMENT

‘ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ ಹೋಲಿಸಿದರೆ ಬಾಹ್ಯ ಸಾಲದ ಪ್ರಮಾಣವು (ಶೇ 5ರಷ್ಟು) ಜಾಗತಿಕ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ. ಹೀಗಾಗಿ ವಿದೇಶಿ ಕರೆನ್ಸಿಗಳ ರೂಪದಲ್ಲಿ ಬಾಹ್ಯ ಸಾಲ ಪಡೆಯಲಾಗುವುದು’ ಎಂದು ಹೇಳಿದ್ದರು.

ಅಗ್ಗದ ದರದ ಕಾರಣಕ್ಕೆ ಯೆನ್‌ ಮತ್ತು ಯುರೊಗಳಿಗೆ ಬಾಂಡ್‌ ಮಾರಾಟ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಹೆಚ್ಚು ನಗದುತನ ಹೊಂದಿರುವುದರಿಂದ ಅಮೆರಿಕದ ಡಾಲರ್‌ ರೂಪದಲ್ಲಿಯೂ ಸಾಲ ಎತ್ತುವ ಆಲೋಚನೆ ಇದೆ. ಇದರಿಂದ ಸರ್ಕಾರ ಬಿಡುಗಡೆ ಮಾಡುವ ಸಾಲ ಪತ್ರಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿಯೂ ಬೇಡಿಕೆ ಕುದುರಲಿದೆ ಎಂದೂ ನಿರೀಕ್ಷಿಸಲಾಗಿದೆ.

‘ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವಿದೇಶಗಳಿಂದ ಸಾಲ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಹಣಕಾಸು ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಅವರು ಈ ಮೊದಲೇ ಹೇಳಿದ್ದರು.

ಖಾಸಗಿ ವಲಯಕ್ಕೆ ಹೆಚ್ಚು ಬಂಡವಾಳ ಹರಿದು ಬರಲು, ಸರ್ಕಾರವು ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸುವುದೊಂದೇ ಮಾರ್ಗವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಸಾಗರೋತ್ತರ ಮಾರುಕಟ್ಟೆಗಳಿಂದ ಸಾಲ ಸಂಗ್ರಹಿಸುವುದು ಹೊಸ ಸರ್ಕಾರದ ಒಟ್ಟಾರೆ ಸಾಲ ನೀತಿಯ ಭಾಗವಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.