ADVERTISEMENT

ಪಿಎಸಿಎಲ್‌ ವಂಚನೆ: ‘ಸೆಬಿ’ ಎಚ್ಚರಿಕೆ

ಪಿಟಿಐ
Published 26 ಜನವರಿ 2020, 19:47 IST
Last Updated 26 ಜನವರಿ 2020, 19:47 IST
   

ನವದೆಹಲಿ: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಭಾಗಿಯಾಗಿರುವ ಪರ್ಲ್ಸ್‌ ಆಗ್ರೊಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಪಿಎಸಿಎಲ್‌) ವಹಿವಾಟುಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಜನರಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಹಣದಲ್ಲಿ ಖರೀದಿಸಿರುವ ರಿಯಲ್‌ ಎಸ್ಟೇಟ್‌ ಆಸ್ತಿಗಳನ್ನು ‘ಪಿಎಸಿಎಲ್‌’ನಅಂಗ ಸಂಸ್ಥೆಗಳು ಮಾರಾಟ ಮಾಡಲು ಹವಣಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ.ಹೀಗಾಗಿ ಕಂಪನಿಗೆ ಸೇರಿದ ಯಾವುದೇ ಸ್ವತ್ತನ್ನು ಖರೀದಿಸುವ ಅಥವಾ ಖರೀದಿ ಪ್ರಕ್ರಿಯೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸದೇ ಇರುವಂತೆ ಸಲಹೆ ನೀಡಿದೆ.

2016ರಲ್ಲಿ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ನೇತೃತ್ವದ ಸಮಿತಿಗೆ ಮಾತ್ರವೇ ಪಿಎಸಿಎಲ್‌ಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಅಧಿಕಾರ ನೀಡಲಾಗಿದೆ ಎಂದೂ ಹೇಳಿದೆ.

ADVERTISEMENT

ಏನಿದು ಪ್ರಕರಣ: ಕಾನೂನು ಬಾಹಿರವಾದ ಹೂಡಿಕೆ ಯೋಜನೆಗಳ ಮೂಲಕ ‘ಪಿಎಸಿಎಲ್‌’ 18 ವರ್ಷಗಳಲ್ಲಿ ₹ 60 ಸಾವಿರ ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿದೆ. ಗೃಹ ಮತ್ತು ರಿಯಲ್‌ ಎಸ್ಟೇಟ್‌ ವಹಿವಾಟಿನ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದೆ.

ಲೋಧಾ ಸಮಿತಿಯು ಹೂಡಿಕೆದಾರರಿಗೆ ಹಣ ಹಿಂದಿರುಗಿಸುವ ಪ್ರಕ್ರಿಯೆ ಆರಂಭಿಸಿದ್ದು, ₹ 5,000ವರೆಗೆ ಹೂಡಿಕೆ ಮಾಡಿರುವ3.81 ಲಕ್ಷ ಜನರಿಗೆ ಹಣ ಹಿಂದಿರುಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಾಹಿತಿ ಕೊರತೆಯಿಂದ ಕೆಲವು ಅರ್ಜಿಗಳನ್ನು ಇದುವರೆಗೂ ಇತ್ಯರ್ಥಪಡಿಸಲಾಗಿಲ್ಲ. ಅರ್ಜಿಗಳಲ್ಲಿನ ಮಾಹಿತಿ ಕೊರತೆ ಸರಿಪಡಿಸಲು ಈ ವರ್ಷದ ಜುಲೈ 31ಕೊನೆಯ ದಿನವಾಗಿದೆ.

ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ವಿಫಲವಾಗಿದ್ದರಿಂದಕಂಪನಿ ಹಾಗೂ ಅದರ 9 ಪ್ರವರ್ತಕರು ಮತ್ತು ನಿರ್ದೇಶಕರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡಲು ‘ಸೆಬಿ’ 2015ರಲ್ಲಿ ಆದೇಶ ನೀಡಿತ್ತು.

ಕಂಪನಿಗೆ ಸೇರಿದ ಆಸ್ತಿಗಳ ಎಲ್ಲಾ ರೀತಿಯ ವ್ಯಾಜ್ಯಗಳನ್ನೂ ನಿವೃತ್ತ ನ್ಯಾಯಾಧೀಶ ಆರ್‌.ಎಸ್‌. ವಿರ್ಕ್‌ ಅವರು ಇತ್ಯರ್ಥಪಡಿಸಲಿದ್ದಾರೆ ಎಂದೂ ‘ಸೆಬಿ’ ತಿಳಿಸಿದೆ. ಲೋಧಾ ಸಮಿತಿಯ ಶಿಫಾರಸಿನ ಮೇರೆಗೆ ಸುಪ್ರೀಂಕೋರ್ಟ್‌, ವಿರ್ಕ್‌ ಅವರಿಗೆ ಅಧಿಕಾರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.