ADVERTISEMENT

‘ಪ್ಯಾನ್‌ 2.0’ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:59 IST
Last Updated 26 ನವೆಂಬರ್ 2024, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸ್ತುತ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್‌ (ಶಾಶ್ವತ ಖಾತೆ ಸಂಖ್ಯೆ) ವ್ಯವಸ್ಥೆಯನ್ನು ಪರಿಷ್ಕರಿಸುವ ಸಂಬಂಧ ‘ಪ್ಯಾನ್‌ 2.0’ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ₹1,435 ಕೋಟಿ ಮೀಸಲಿಟ್ಟಿದೆ. 

ಬಳಕೆದಾರರ ಸ್ನೇಹಿ ಪ್ಯಾನ್‌ ಕಾರ್ಡ್‌ ವಿತರಿಸುವುದು ಸರ್ಕಾರದ ಗುರಿಯಾಗಿದೆ. ಜೊತೆಗೆ, ತಂತ್ರಜ್ಞಾನದ ಬಲದೊಂದಿಗೆ ಪ್ಯಾನ್‌ ಕಾರ್ಡ್‌ಗಳ ಸುರಕ್ಷತೆಗೆ ಒತ್ತು ನೀಡುವ ಉದ್ದೇಶ ಹೊಂದಿದೆ.

ಹಾಲಿ ಇರುವ ಕಾರ್ಡ್‌ಗಳ ಮಾನ್ಯತೆ ರದ್ದಾಗುವುದಿಲ್ಲ. ಬಳಕೆದಾರರು ಹೊಸ ಪ್ಯಾನ್‌ ಕಾರ್ಡ್ ಪಡೆದರೂ ಅವರ ನಂಬರ್‌ ಬದಲಾಗುವುದಿಲ್ಲ. ಅವರಿಗೆ ಕ್ಯೂಆರ್‌ ಕೋಡ್‌ ಹೊಂದಿದ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದರಿಂದ ಕಾರ್ಡ್‌ಗಳ ಪರಿಶೀಲನೆ ಸುಲಭವಾಗುತ್ತದೆ. ಅಲ್ಲದೆ, ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮೂಲಕ ನೇರವಾಗಿ ಬಳಕೆದಾರರು ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ ಎಂದು ಸರ್ಕಾರ ಹೇಳಿದೆ.

ADVERTISEMENT

ಹೊಸ ಕಾರ್ಡ್‌ಗಳಿಗೆ ಬಳಕೆದಾರರು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ತೆರಿಗೆದಾರರು ಹಾಗೂ ಉದ್ಯಮಗಳ ಹಣಕಾಸಿನ ವ್ಯವಹಾರವನ್ನು ಸುಧಾರಿಸಲು 2.0 ಯೋಜನೆಯನ್ನು ರೂಪಿಸಲಾಗಿದೆ. ತ್ವರಿತಗತಿಯಲ್ಲಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ. 

ಈ ಕಾರ್ಡ್‌ಗಳು ಪರಿಸರ ಸ್ನೇಹಿಯಾಗಿದ್ದು, ಹೆಚ್ಚು ಸುರಕ್ಷಿತವಾಗಿವೆ. ತೆರಿಗೆ  ನೋಂದಣಿ ಪ್ರಕ್ರಿಯೆ ವೇಗವಾಗಿ ನಡೆಯಲಿದೆ. ಸರ್ಕಾರಿ ಏಜೆನ್ಸಿಗಳ ಡಿಜಿಟಲ್‌ ವ್ಯವಸ್ಥೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಈ ಪ್ಯಾನ್‌ ಕಾರ್ಡ್‌ ಅನ್ನು ಸಾಮಾನ್ಯ ಗುರುತಿನ ಸಾಧನವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ. 

‘ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ’  

ನವದೆಹಲಿ: ‘ಪ್ರಸ್ತುತ ಪ್ಯಾನ್‌ಕಾರ್ಡ್‌ ಹೊಂದಿರುವವರು 2.0 ಯೋಜನೆಯಡಿ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ’ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ದೇಶದಲ್ಲಿ 78 ಕೋಟಿ ಪ್ಯಾನ್‌ ಕಾರ್ಡ್‌ ಹಾಗೂ 73.28 ಲಕ್ಷ ಟ್ಯಾನ್‌ ಕಾರ್ಡ್‌ಗಳಿವೆ.  ಕ್ಯೂಆರ್‌ ಕೋಡ್‌ ಹೊಸದೇನಲ್ಲ. 2017–18ರಿಂದ ವಿತರಿಸಿರುವ ಕಾರ್ಡ್‌ಗಳಲ್ಲಿ ಈಗಾಗಲೇ ಇದನ್ನು ಅನುಷ್ಠಾನಗೊಳಿಸಲಾಗಿದೆ. ಹಳೆಯ ಕಾರ್ಡ್‌ಗಳಲ್ಲಿ ಇದನ್ನು ನಮೂದಿಸಿಲ್ಲ. ಕ್ಯೂಆರ್‌ ಕೋಡ್‌ ಇರುವ ಕಾರ್ಡ್‌ಗಳನ್ನು ಪಡೆಯಲು ಇಚ್ಛಿಸುವವರಿಗೆ 2.0 ಯೋಜನೆಯಡಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.