ADVERTISEMENT

ಬ್ಯಾಂಕ್‌ ಖಾತೆ ಮೊತ್ತ ಆದಾಯದ ಅಳತೆಗೋಲಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 23:00 IST
Last Updated 19 ಏಪ್ರಿಲ್ 2023, 23:00 IST
   

ಬೆಂಗಳೂರು: ‘ಬ್ಯಾಂಕ್‌ನ ಪಾಸ್‌ ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ಆಧಾರವಾಗಿಸಿಕೊಂಡು ಅದನ್ನೇ ವ್ಯಕ್ತಿಯೊಬ್ಬರ ಆದಾಯಕ್ಕೆ ಪರಿಗಣಿಸಲು ಆಗದು‘ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದರಲ್ಲಿ ಬ್ಯಾಂಕ್‌ನ ಪಾಸ್ ಬುಕ್‌ನಲ್ಲಿ ನಮೂದಾಗುವ ಅಂಕಿ ಅಂಶಗಳನ್ನು ಪರಿಗಣಿಸಿ ಪರಿಹಾರ ನೀಡುವುದಕ್ಕೆ ನಿರ್ದೇಶಿಸಿದ್ದ, ‘ಮೋಟಾರು ವಾಹನಗಳ ಅಪಘಾತಗಳ ಪರಿಹಾರ ನ್ಯಾಯಮಂಡಳಿ’ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಪ್ರಕರಣದಲ್ಲಿ ಮೃತರು ಬಟ್ಟೆ ವ್ಯಾಪಾರ ಮಾಡುತ್ತಿದ್ದು ತಿಂಗಳಿಗೆ ₹ 50 ಸಾವಿರ ಸಂಪಾದನೆ ಮಾಡುತ್ತಿದ್ದರು ಎಂದು ಮೃತರ ಪತ್ನಿ ತಿಳಿಸಿದ್ದಾರೆ. ಆದರೆ, ಈ ವಾದವನ್ನು ಪುಷ್ಟೀಕರಿಸಲು ಯಾವುದೇ ಸೂಕ್ತ ದಾಖಲೆ ಸಲ್ಲಿಸಿಲ್ಲ. ಬದಲಿಗೆ, ಮೃತರಿಗೆ ಸಂಬಂಧಿಸಿದ ಎರಡು ಬ್ಯಾಂಕ್ ಪಾಸ್ ಬುಕ್‌ಗಳನ್ನಷ್ಟೇ ಸಲ್ಲಿಸಲಾಗಿದೆ. ಒಂದು ಮೃತರಿಗೆ ಸೇರಿದ್ದರೆ ಮತ್ತೊಂದು ಅವರ ಪತ್ನಿಯ ಜಂಟಿ ಖಾತೆಯಾಗಿದೆ. ಆದರೆ, ಎರಡೂ ಚಾಲ್ತಿ ಖಾತೆಗಳಲ್ಲ’ ಎಂದು ನ್ಯಾಯಪೀಠ ಹೇಳಿದೆ. ‘ತಿಂಗಳಿಗೆ 50 ಸಾವಿರ ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ನಂಬಿದರೂ ಅದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಈ ಸಂಬಂಧ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.

ಹೀಗಾಗಿ, ಬ್ಯಾಂಕ್ ಪಾಸ್‌ ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ತಿಂಗಳ ಆದಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ‍’ ಎಂಬ ಅಭಿಪ್ರಾಯದೊಂದಿಗೆ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ₹ 23.03 ಲಕ್ಷ ಪರಿಹಾರ ಪಾವತಿಸುವಂತೆ ನಿರ್ದೇಶಿಸಿದ್ದ ನ್ಯಾಯಮಂಡಳಿಯ ಆದೇಶವನ್ನು ಮಾರ್ಪಾಡು ಮಾಡಿ ₹ 21 ಲಕ್ಷ ಪಾವತಿಸಬೇಕು ಎಂದು ಆದೇಶಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.