ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಮಂಗಳವಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿವೆ. ಇದರಿಂದ ಮುಂಬೈನಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 99ರ ಗಡಿಯನ್ನು ದಾಟಿದೆ. ಪೆಟ್ರೋಲ್ ದರ ₹ 99.14ಕ್ಕೆ, ಡೀಸೆಲ್ ದರ ₹ 90.71ಕ್ಕೆ ತಲುಪಿದೆ.
ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಲೀಟರಿಗೆ 27 ಪೈಸೆ ಮತ್ತು ಡೀಸೆಲ್ ದರವನ್ನು 29 ಪೈಸೆಗಳಷ್ಟು ಏರಿಕೆ ಮಾಡಿವೆ. ಇದರಿಂದಾಗಿ ಈ ತಿಂಗಳಿನಲ್ಲಿ 10ನೇ ಬಾರಿಗೆ ದರ ಹೆಚ್ಚಳ ಮಾಡಿದಂತಾಗಿದೆ. ಪರಿಣಾಮವಾಗಿ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 92.85 ಮತ್ತು ಡೀಸೆಲ್ ದರ ಲೀಟರಿಗೆ ₹ 83.51ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹ 95.94 ಮತ್ತು ಡೀಸೆಲ್ ದರ ₹ 88.53ರಷ್ಟಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ನಗರಗಳಲ್ಲಿ ಪೆಟ್ರೋಲ್ ದರವು ಈಗಾಗಲೇ ₹ 100ರ ಗಡಿ ದಾಟಿ ಮಾರಾಟವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.