ADVERTISEMENT

ತೈಲ ಬೆಲೆ ಏರಿಕೆಯ ಹೊರೆ ಪೂರ್ತಿಯಾಗಿ ಆಗಿಲ್ಲ ವರ್ಗಾವಣೆ: ಅಧಿಕಾರಿಗಳ ಹೇಳಿಕೆ

ಪಿಟಿಐ
Published 3 ಅಕ್ಟೋಬರ್ 2021, 14:55 IST
Last Updated 3 ಅಕ್ಟೋಬರ್ 2021, 14:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ತೈಲ ಬೆಲೆ ಏರಿಕೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೂರ್ತಿಯಾಗಿ ದೇಶಿ ಗ್ರಾಹಕರ ಹೆಗಲಿಗೆ ವರ್ಗಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಬ್ರಿಟನ್ನಿನಲ್ಲಿ ಆಗಿರುವಂತೆ, ‍ಪೆಟ್ರೋಲ್ ಬಂಕ್‌ಗಳಲ್ಲಿ ದಾಸ್ತಾನು ಖಾಲಿಯಾಗುವ ಪರಿಸ್ಥಿತಿ ಭಾರತದಲ್ಲಿ ಎಲ್ಲಿಯೂ ಸೃಷ್ಟಿಯಾಗದು ಎಂದು ಹೇಳಿದ್ದಾರೆ.

ಪೆಟ್ರೋಲ್ ಬೆಲೆಯನ್ನು ಸತತ ಮೂರನೆಯ ದಿನವೂ ಹೆಚ್ಚಿಸಲಾಗಿದೆ. ‘ವೆಚ್ಚಕ್ಕೆ ಅನುಗುಣವಾಗಿ ತೈಲೋತ್ಪನ್ನಗಳ ದೇಶಿ ಮಾರಾಟ ದರ ಎಷ್ಟಿರಬೇಕು ಎಂಬ ವಿಚಾರವಾಗಿ ತೈಲ ಮಾರಾಟ ಕಂಪನಿಗಳು ತಮ್ಮದೇ ಆದ ತೀರ್ಮಾನ ಕೈಗೊಳ್ಳುತ್ತಿವೆ. ತೀವ್ರ ಏರಿಳಿತ ಉಂಟಾಗದಂತೆಯೂ ನೋಡಿಕೊಳ್ಳುತ್ತಿವೆ’ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.

‘ನಾವು ಪರಿಸ್ಥಿತಿಯ ಮೇಲೆ ಗಮನ ಇರಿಸಿದ್ದೇವೆ. ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಅಸ್ಥಿರತೆಯು ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪರಿಣಾಮ ಬೀರದಂತೆ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 76.71 ಡಾಲರ್‌ಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳವಾಗಿದೆ.

ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಲ್ಲಿ ಆದ ತೊಡಕುಗಳೇ ಈ ಬೆಲೆ ಹೆಚ್ಚಳಕ್ಕೆ ಕಾರಣ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಹೆಚ್ಚಳದ ಅಷ್ಟೂ ಹೊರೆಯನ್ನು ದೇಶಿ ಗ್ರಾಹಕರಿಗೆ ವರ್ಗಾವಣೆ ಮಾಡಿಲ್ಲ ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ. ‘ಎಲ್‌ಪಿಜಿ ದರವನ್ನೇ ಗಮನಿಸಿ. ಅವುಗಳ ಬೆಲೆಯು 665 ಡಾಲರ್ ಇದ್ದುದು 797 ಡಾಲರ್‌ಗೆ ಏರಿಕೆ ಆಗಿದೆ. ಆದರೆ, ಈ ಪ್ರಮಾಣದ ಏರಿಕೆಯನ್ನು ದೇಶಿ ಗ್ರಾಹಕರ ಹೆಗಲಿಗೆ ವರ್ಗಾವಣೆ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ಏರಿಕೆಯ ಹೊರೆಯನ್ನು ತಾವೇ ನಿಭಾಯಿಸುತ್ತಿವೆ ಎಂದಿದ್ದಾರೆ.

ನೈಸರ್ಗಿಕ ಅನಿಲ ಬೆಲೆಯಲ್ಲಿ ಆಗಿರುವ ಶೇ 62ರಷ್ಟು ಹೆಚ್ಚಳದ ಕಾರಣದಿಂದಾಗಿ ಸಿಎನ್‌ಜಿ ಬೆಲೆ ಕೂಡ ಹೆಚ್ಚಿಸಬೇಕಾಗಿದೆ. ಆದರೆ, ಸಿಎನ್‌ಜಿ ಬೆಲೆಯ ಹೆಚ್ಚಳ ನಿಯಂತ್ರಿತ ಪ್ರಮಾಣದಲ್ಲಿ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ‘ಬ್ರಿಟನ್ನಿನಂತಹ ಅಭಿವೃದ್ಧಿ ಹೊಂದಿರುವ ದೇಶಗಳ ಪೆಟ್ರೋಲ್ ಬಂಕ್‌ಗಳಲ್ಲಿ ದಾಸ್ತಾನು ಖಾಲಿಯಾಗಿದೆ. ಇಂತಹ ಸ್ಥಿತಿ ಭಾರತದಲ್ಲಿ ಎಲ್ಲಿಯೂ ಇಲ್ಲ. ದೇಶದ ತೈಲ ಮಾರಾಟ ಕಂಪನಿಗಳು ಬೆಲೆಯನ್ನು ನಿಯಂತ್ರಿಸುತ್ತಿರುವುದಷ್ಟೇ ಅಲ್ಲದೆ, ಪೂರೈಕೆಯು ಸ್ಥಿರವಾಗಿ ಇರುವಂತೆಯೂ ನೋಡಿಕೊಳ್ಳುತ್ತಿವೆ’ ಎಂದು ಅಧಿಕಾರಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಸ್ಥಿತಿಯು ಇನ್ನು ಕೆಲವು ದಿನಗಳಲ್ಲಿ ಸ್ಥಿರವಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.