ADVERTISEMENT

ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

ಪಿಟಿಐ
Published 6 ಮೇ 2021, 7:26 IST
Last Updated 6 ಮೇ 2021, 7:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 25 ಪೈಸೆ ಮತ್ತು ಡೀಸೆಲ್ 30 ಪೈಸೆ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ದರ ಏರಿಸಿವೆ.

ಈ ಮೂಲಕ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹90.74ನಿಂದ ₹90.99ಕ್ಕೆ ಏರಿಕೆಯಾದರೆ, ಡೀಸೆಲ್ ದರ ₹81.12ನಿಂದ ₹81.42ಕ್ಕೆ ಏರಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ತಿಳಿಸಿದೆ.

ರಾಜ್ಯಗಳ ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗುತ್ತದೆ.

ADVERTISEMENT

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಲೆ ಏರಿಕೆಗೆ ಬ್ರೇಕ್ ಹಾಕಿದ್ದ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಮತ ಎಣಿಕೆ ಮುಗಿದ ಬಳಿಕ ಸತತ ಮೂರನೇ ಬಾರಿಗೆ ತೈಲ ಬೆಲೆ ಏರಿಸಿವೆ.

ಈ ಮೂರು ದಿನಗಳಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 59 ಪೈಸೆ ಮತ್ತು ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ.

ಕಳೆದ ಮಾರ್ಚ್‌ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಸಿದಾಗಿನಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹ 21.58 ಮತ್ತು ಡೀಸೆಲ್ ₹ 19.18 ಏರಿಕೆಯಾಗಿದೆ. ಮಾರ್ಚ್ 24 ಮತ್ತು ಏಪ್ರಿಲ್ 15 ರ ನಡುವೆ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ 67 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 74 ಪೈಸೆ ಇಳಿಕೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.