ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 15 ಪೈಸೆ, ಡೀಸೆಲ್ ಬೆಲೆ 18 ಪೈಸೆ ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 24 ಪೈಸೆ, ಡೀಸೆಲ್ ಬೆಲೆ 27 ಪೈಸೆ ಏರಿಕೆ ಆಗಿದೆ. ಕಳೆದ 18 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಆಗಿರಲಿಲ್ಲ.
ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಚುನಾವಣೆ ನಡೆದು, ಫಲಿತಾಂಶ ಪ್ರಕಟವಾದ ನಂತರ ತೈಲ ಬೆಲೆಯನ್ನು ಪರಿಷ್ಕರಿಸಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳು ತೈಲ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ ಎಂಬ ಅಂದಾಜು ಇದ್ದರೂ, ಅಮೆರಿಕದಲ್ಲಿ ತೈಲ ಬೆಲೆ ಹೆಚ್ಚಳ ಆಗುತ್ತಿರುವ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ. ಏಪ್ರಿಲ್ 27ರ ನಂತರ ಕಚ್ಚಾತೈಲದ ಬೆಲೆ ಹೆಚ್ಚಳ ಆಗುತ್ತಲೇ ಇದೆ ಎಂದು ಮೂಲಗಳು ಹೇಳಿವೆ.
ಮಾರ್ಚ್ 24ರಿಂದ ಏಪ್ರಿಲ್ 15ರ ನಡುವಿನ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ನ ದೇಶಿ ಮಾರಾಟ ದರದಲ್ಲಿ ನಾಲ್ಕು ಬಾರಿ ಇಳಿಕೆ ಮಾಡಲಾಯಿತು. ನಾಲ್ಕು ಬಾರಿ ಕಡಿತ ಮಾಡಿದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಸರಿಸುಮಾರು 67 ಪೈಸೆ, ಡೀಸೆಲ್ ಬೆಲೆ ಸರಿಸುಮಾರು 74 ಪೈಸೆ ಇಳಿಕೆ ಆಯಿತು.
2020ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಎಕ್ಸೈಸ್ ಸುಂಕವನ್ನು ಹೆಚ್ಚಿಸಿದ ನಂತರ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹ 21.58ರಷ್ಟು, ಡೀಸೆಲ್ ಬೆಲೆಯು ಲೀಟರ್‌ಗೆ ₹ 19.18ರಷ್ಟು ಜಾಸ್ತಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.