ADVERTISEMENT

ಪಿಂಚಣಿ: ಪರಿಶೀಲನೆ ನಂತರ ಪ್ರಕ್ರಿಯೆ

ಇಪಿಎಸ್‌ ಅಡಿ ಹೆಚ್ಚಿನ ಪಿಂಚಣಿ ಯೋಜನೆ: ಅಧಿಕಾರಿಗಳಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 4:25 IST
Last Updated 28 ಫೆಬ್ರುವರಿ 2023, 4:25 IST
ಬೆಂಗಳೂರಿನ ಕುಂಬಳಗೋಡಿನಲ್ಲಿರುವ ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್‌ ಲಿಮಿಟೆಡ್‌ನ ಮುದ್ರಣ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ಇಪಿಎಫ್ ಜಾಗೃತಿ ಶಿಬಿರ ‘ನಿಧಿ ಆಪ್ಕೆ ನಿಕಟ್’ನಲ್ಲಿ ಉದ್ಯೋಗಿಗಳಿಗೆ ಲೆಕ್ಕಾಧಿಕಾರಿ ಸಣ್ಣಬೋರಮ್ಮ ಮಾಹಿತಿ ನೀಡಿದರು. ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ರವಿಚಂದ್ರ ಶೇಟ್ ಇದ್ದರು  –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕುಂಬಳಗೋಡಿನಲ್ಲಿರುವ ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್‌ ಲಿಮಿಟೆಡ್‌ನ ಮುದ್ರಣ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ಇಪಿಎಫ್ ಜಾಗೃತಿ ಶಿಬಿರ ‘ನಿಧಿ ಆಪ್ಕೆ ನಿಕಟ್’ನಲ್ಲಿ ಉದ್ಯೋಗಿಗಳಿಗೆ ಲೆಕ್ಕಾಧಿಕಾರಿ ಸಣ್ಣಬೋರಮ್ಮ ಮಾಹಿತಿ ನೀಡಿದರು. ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ರವಿಚಂದ್ರ ಶೇಟ್ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಚ್ಚಿನ ಪಿಂಚಣಿ ಬಯಸಿ ಉದ್ಯೋಗಿ–ಉದ್ಯೋಗದಾತರು ನೀಡುವ ಅರ್ಜಿಯನ್ನು ಪರಿಶೀಲಿಸಿದ ನಂತರ ಹಣಕಾಸಿನ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಈ ಬಗ್ಗೆ ಉದ್ಯೋಗಿಗೆ ಮಾಹಿತಿ ನೀಡಿಯೇ ಮುಂದುವರಿಯಲಾಗುತ್ತದೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ರಾಜರಾಜೇಶ್ವರಿ ನಗರ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಹೇಳಿದರು.

ಕುಂಬಳಗೋಡಿನಲ್ಲಿರುವ, ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಮುದ್ರಣ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ‘ನಿಧಿ ಆಪ್ಕೆ ನಿಕಟ್‌-2.0’ ಶಿಬಿರದಲ್ಲಿ ಅವರು ಈ ಮಾಹಿತಿ ನೀಡಿದರು.

‘ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಬಯಸುವ ಉದ್ಯೋಗಿ, ತನ್ನ ಉದ್ಯೋಗದಾತರೊಂದಿಗೆ ಜಂಟಿಯಾಗಿ ಪ್ರಮಾಣಪತ್ರ ನೀಡಬೇಕು. ಆಯಾ ಉದ್ಯೋಗಿಯ ಸೇವಾವಧಿ, ಪಿಂಚಣಿ ಬಾಬ್ತಿನಲ್ಲಿರುವ ಹಣವನ್ನು ಲೆಕ್ಕ ಮಾಡಿ, ಎಷ್ಟು ಹಣವನ್ನು ಹೆಚ್ಚುವರಿಯಾಗಿ ಕಟ್ಟಬೇಕು ಎಂಬ ಮಾಹಿತಿಯನ್ನು ಇ–ಮೇಲ್‌,ಪೋಸ್ಟ್‌ ಮೂಲಕ ನೀಡಲಾಗುತ್ತದೆ. ದೂರವಾಣಿ ಕರೆ ಹಾಗೂ ಎಸ್‌ಎಂಎಸ್‌ ಮೂಲಕವೂ ಮಾಹಿತಿ ರವಾನಿಸಲಾಗುತ್ತದೆ’ ಎಂದು ರಾಜರಾಜೇಶ್ವರಿ ನಗರ ಪ್ರಾದೇಶಿಕ ಕಚೇರಿ ಲೆಕ್ಕಾಧಿಕಾರಿ ಸಣ್ಣಬೋರಮ್ಮ ತಿಳಿಸಿದರು.

ADVERTISEMENT

‘ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗಿ–ಉದ್ಯೋಗದಾತರು ನೀಡುವ ಪ್ರಮಾಣಪತ್ರದಲ್ಲಿ ಪಿಎಫ್‌
ನಿಂದ ಹಣ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಬರೆಯಲಾಗಿದೆ. ಆದರೆ, ನಮಗೆ ಗೊತ್ತಿಲ್ಲದೆ ಹಣ ವರ್ಗಾವಣೆ ಮಾಡಿಕೊಳ್ಳುವುದು ಸರಿಯಲ್ಲ ಅಲ್ಲವೇ? ಅಲ್ಲದೆ, ಪಿಎಫ್‌ನಿಂದ ಪಿಂಚಣಿ ಖಾತೆಗೆ ಹೋಗುವ ಹಣಕ್ಕೆ ಬಡ್ಡಿ ದೊರೆಯುವುದೇ’ ಎಂದು ರಾಮಕೃಷ್ಣ ಪ್ರಶ್ನಿಸಿದರು.

‘ಹೆಚ್ಚಿನ ಪಿಂಚಣಿಗಾಗಿ ಭವಿಷ್ಯ ನಿಧಿಯಿಂದ (ಪಿಎಫ್‌) ವರ್ಗಾವಣೆಯಾಗುವ ಹಣಕ್ಕೆ ಬಡ್ಡಿ ನೀಡಲಾಗುತ್ತಿದೆಯೇ ಅಥವಾ ಖಾತೆಯಲ್ಲಿ ಹಣ ಇಲ್ಲದಿದ್ದರೆ ಹೇಗೆ ಪಾವತಿಸಿಕೊಳ್ಳಬೇಕು ಎಂಬ ಬಗ್ಗೆ ನಮ್ಮ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿಲ್ಲ. ವರ್ಗಾವಣೆ ಬಗ್ಗೆಯೂ ಈ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ (ಎಸ್‌ಒಪಿ) ಬಂದಮೇಲೆ ಎಲ್ಲ ಪ್ರಕ್ರಿಯೆಗಳನ್ನೂ ವಿವರಿಸಲಾಗುತ್ತದೆ’ ಎಂದು ಸಣ್ಣಬೋರಮ್ಮ ಉತ್ತರ ನೀಡಿದರು.

‘1994ರವರೆಗೆ ಒಂದು ಸ್ಲ್ಯಾಬ್‌, 2014ರವರೆಗೆ ಮತ್ತೊಂದು ಸ್ಲ್ಯಾಬ್‌ ಹಾಗೂ 2014ರ ನಂತರ ಹೆಚ್ಚಿನ ಪಿಂಚಣಿ ಯೋಜನೆಯ ಸ್ಲ್ಯಾಬ್‌ ಅನ್ವಯವಾಗುವಂತೆ ಲೆಕ್ಕಾಚಾರದ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. 2014ರ ನಂತರದಿಂದ ಹೆಚ್ಚಿನ ಪಿಂಚಣಿ ಯೋಜನೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ನಿವೃತ್ತರಾದವರು ಹೇಗೆ ಇದನ್ನು ಪಾವತಿಸಬೇಕು ಎಂಬುದನ್ನೂ ಮುಂದಿನ ದಿನಗಳಲ್ಲಿ ವಿವರಿಸಲಾಗುತ್ತದೆ. ಹೆಚ್ಚಿನ ವೈಯಕ್ತಿಕ ಮಾಹಿತಿ ಬೇಕಿದ್ದವರು ನೌಕರರ ಭವಿಷ್ಯ
ನಿಧಿ ಸಂಸ್ಥೆಯ ಯಾವುದೇ ಕಚೇರಿಯನ್ನು ಸಂಪರ್ಕಿಸಬಹುದು. ಅಲ್ಲಿ ‘ಹೆಲ್ಪ್‌ ಡೆಸ್ಕ್‌’ ಸ್ಥಾಪಿಸಲಾಗಿದೆ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.