ADVERTISEMENT

ಪಿಎಂಸಿ ಬ್ಯಾಂಕ್ ವಿಲೀನ ಯತ್ನ

ರಾಯಿಟರ್ಸ್
Published 16 ಸೆಪ್ಟೆಂಬರ್ 2020, 15:29 IST
Last Updated 16 ಸೆಪ್ಟೆಂಬರ್ 2020, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಗರಣದಲ್ಲಿ ಸಿಲುಕಿರುವ ಪಿಎಂಸಿ ಬ್ಯಾಂಕನ್ನು ಬೇರೆ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವ ಪ್ರಯತ್ನ ನಡೆದಿದೆ ಎಂದು ಪಿಎಂಸಿ ಬ್ಯಾಂಕಿನ ಆಡಳಿತಾಧಿಕಾರಿ, ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಿಎಂಸಿ ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲ ಪಡೆದು ಸುಸ್ತಿದಾರರಾಗಿರುವವರಿಂದ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಗೆ ಕೋವಿಡ್–19 ಸಾಂಕ್ರಾಮಿಕವು ಅಡಚಣೆ ಉಂಟುಮಾಡಿದೆ.

ಪಿಎಂಸಿ ಬ್ಯಾಂಕಿನಲ್ಲಿ ಹಣಕಾಸಿನ ಅವ್ಯವಹಾರ ನಡೆದಿದ್ದು ಗೊತ್ತಾದ ನಂತರ ಆ ಬ್ಯಾಂಕಿನ ನಿಯಂತ್ರಣವನ್ನು ಆರ್‌ಬಿಐ ತನ್ನ ಅಧೀನಕ್ಕೆ ತೆಗೆದುಕೊಂಡಿದೆ. ಈ ಬ್ಯಾಂಕಿನಲ್ಲಿ ಠೇವಣಿ ಇರಿಸಿರುವವರು ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಹಿಂದಕ್ಕೆ ಪಡೆಯುವಂತಿಲ್ಲ ಎಂದು ಆರ್‌ಬಿಐ ಮಿತಿ ಹೇರಿದೆ.

‘ವಿಲೀನ ಕೋರಿಕೆಯನ್ನು ಇಟ್ಟುಕೊಂಡು ದೇಶದ ಪ್ರಮುಖ ಬ್ಯಾಂಕುಗಳ ಜೊತೆ ಮಾತುಕತೆ ನಡೆಸಲು ಪಿಎಂಸಿ ಬ್ಯಾಂಕ್ ಯತ್ನ ನಡೆಸಿದೆ’ ಎಂದು ಬ್ಯಾಂಕಿನ ಆಡಳಿತಾಧಿಕಾರಿ ಕೋರ್ಟ್‌ಗೆ ಸೆಪ್ಟೆಂಬರ್ 10ರಂದು ತಿಳಿಸಿದ್ದಾರೆ. ಯಾವ ಬ್ಯಾಂಕ್ ಜೊತೆ ಮಾತುಕತೆ ನಡೆದಿದೆ ಎಂಬುದರ ವಿವರವನ್ನು ಅವರು ನೀಡಿಲ್ಲ.

ADVERTISEMENT

ಎಚ್‌ಡಿಐಎಲ್ ಮತ್ತು ಅದರ ಸಹವರ್ತಿ ಕಂಪನಿಗಳು ಪಿಎಂಸಿ ಬ್ಯಾಂಕಿಗೆ ಒಟ್ಟು ‌₹ 6,900 ಕೋಟಿ ಪಾವತಿಸಬೇಕು. ಆದರೆ, ಈ ಕಂಪನಿಗಳು ಸಾಲಕ್ಕೆ ಖಾತರಿಯಾಗಿ ನೀಡಿರುವ ಆಸ್ತಿಗಳ, ಭದ್ರತೆಗಳ ಮೊತ್ತ ₹ 1,160 ಕೋಟಿ ಮಾತ್ರ ಎಂದು ಕೋರ್ಟ್‌ಗೆ ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಆಡಳಿತಾಧಿಕಾರಿ, ಆರ್‌ಬಿಐ ಮತ್ತು ಎಚ್‌ಡಿಐಎಲ್‌ ನಿರಾಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.