ADVERTISEMENT

ಪತ್ನಿ ಹೆಸರಿನಲ್ಲಿರಿಸಿದ ಠೇವಣಿಗೆ ಬರುವ ಬಡ್ಡಿಗೆ ತೆರಿಗೆ ಕಟ್ಟಬೇಕೆ?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST
save
save   

ನಾನು 8 ಎಕರೆ ಕೃಷಿ ಜಮೀನು ಮಾರಾಟ ಮಾಡಿ ಬರುವ₹ 25 ಲಕ್ಷವನ್ನು 4 ಜನ ಮಕ್ಕಳು ಹಾಗೂ 2 ವರ್ಷದ ಮೊಮ್ಮಗಳ ಹೆಸರಿನಲ್ಲಿ ಅಂಚೆ ಕಚೇರಿ ಅಥವಾ ಎಸ್‌ಬಿಐ ಬ್ಯಾಂಕಿನಲ್ಲಿ ಠೇವಣಿ ಇರಿಸಲು ನಿಮ್ಮ ಸಲಹೆ ಕೇಳುತ್ತೇವೆ.

-ಹೆಸರು, ಊರು ಬೇಡ

ಉತ್ತರ: ಕೃಷಿ ಜಮೀನು ಮಾರಾಟ ಮಾಡಿ ಬರುವ ಮೊತ್ತಕ್ಕೆ ಸೆಕ್ಷನ್ 48 ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ (Capital gain tax) ಬರುವುದಿಲ್ಲ. ಆದರೆ, ಇಂತಹ ಜಮೀನು ಒಂದು ಪಟ್ಟಣದ 8 ಕಿ.ಮೀ. ಒಳಗಿರುವಲ್ಲಿ ತೆರಿಗೆ ಕೊಡಬೇಕಾಗುತ್ತದೆ. ನೀವು ಬಯಸಿದಂತೆ ಮಾರಾಟ ಮಾಡಿ ಬರುವ ಹಣ ಅಂಚೆ ಕಚೇರಿ ಅಥವಾ ಎಸ್‌ಬಿಐನಲ್ಲಿ 4 ಜನ ಮಕ್ಕಳು ಮತ್ತು ಓರ್ವ ಮೊಮ್ಮಗಳ ಹೆಸರಿನಲ್ಲಿ ಠೇವಣಿ ಇರಿಸಬಹುದು. ಬಡ್ಡಿ ನಿಗದಿಪಡಿಸಿದ ಠೇವಣಿ ಹೊರತುಪಡಿಸಿ, ಊಹಾಪೋಹಗಳಿಗೆ ಒಳಗಾಗುವ ಹೆಚ್ಚಿನ ವರಮಾನದ ಆಸೆಯಿಂದ ಬೇರಾವ ಯೋಜನೆಯಲ್ಲಿ ಇರಿಸಬೇಡಿರಿ.

ADVERTISEMENT

***

ನಾನು ನಿವೃತ್ತ ಶಿಕ್ಷಕ. ವಯಸ್ಸು 73. ಮಾಸಿಕ ಪಿಂಚಣಿ₹ 30,000 ನಾನು ₹ 5,000, ಆರ್.ಡಿ. ಮಾಡಿದ್ದೇವೆ. ಆರ್.ಡಿ. ಯಿಂದ ಬರುವ ಬಡ್ಡಿಗೆ ಮೂಲದಲ್ಲಿ ತೆರಿಗೆ (ಟಿಡಿಎಸ್) ಮುರಿಯುತ್ತಾರೆ. ತೆರಿಗೆ ವಿಚಾರದಲ್ಲಿ ಮಾಹಿತಿ ನೀಡಿ.

–ಬಿ. ಚಂದ್ರಪ್ಪ, ಬೆಂಗಳೂರು

ಉತ್ತರ: 1–4–2019 ರಿಂದ ಎಲ್ಲಾ ವರ್ಗದ ಜನರು₹ 5 ಲಕ್ಷ ವಾರ್ಷಿಕ ವರಮಾನ ಪಡೆಯುವ ತನಕ ಅವರು ತೆರಿಗೆಗೆ ಒಳಗಾಗುವುದಿಲ್ಲ. ನೀವು ಪಿಂಚಣಿದಾರರು ಆಗಿರುವುದರಿಂದ ಸೆಕ್ಷನ್ 16ರ ಆಧಾರದ ಮೇಲೆ₹ 50,000 ಹಾಗೂ ಠೇವಣಿ ಮೇಲೆ ಬರುವ ಬಡ್ಡಿಯಲ್ಲಿ ಗರಿಷ್ಠ₹ 50,000 ಹೊರತುಪಡಿಸಿ ವಿನಾಯಿತಿ ಪಡೆಯಬಹುದು. ನಿಮ್ಮ ಪಿಂಚಣಿ ಆದಾಯ ವಾರ್ಷಿಕವಾಗಿ₹ 3.60 ಲಕ್ಷ ಇದ್ದು ಆರ್‌ಡಿ.ಯ ಬಡ್ಡಿ ಕೂಡಾ ವಾರ್ಷಿಕವಾಗಿ ಸುಮಾರು₹ 3,500 ಇರಲಿದೆ. ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ನೀವು I.T.Return ತುಂಬಬೇಕಾಗುತ್ತದೆ. ನೀವು ಪ್ರತಿ ವರ್ಷದ ಏಪ್ರಿಲ್ ಒಂದನೇ ವಾರ ಬ್ಯಾಂಕಿಗೆ 15H ಫಾರಂ ಸಲ್ಲಿಸಿ ‘ಟಿಡಿಎಸ್‌’ ಮಾಡದಂತೆ ತಿಳಿಸಿರಿ. ಒಂದು ವೇಳೆ ‘ಟಿಡಿಎಸ್‌’ ಮಾಡಿದಲ್ಲಿ 16A ಫಾರಂ ಪಡೆದು ಐಟಿ ರಿಟರ್ನ್‌ ತುಂಬಿ, ‘ಟಿಡಿಎಸ್‌’ ಹಣ ವಾಪಸ್‍ಪಡೆಯಬಹುದು.

***

ನಾನು ನಿವೃತ್ತ ಬ್ಯಾಂಕ್ ನೌಕರ. ನನ್ನ ಉಳಿತಾಯದಲ್ಲಿ₹ 15 ಲಕ್ಷವನ್ನು ಅಂಚೆ ಕಚೇರಿಯ ಸೀನಿಯರ್ ಸಿಟಿಜನ್ ಠೇವಣಿಯಲ್ಲಿ ಇರಿಸಿದ್ದೇನೆ. ಅದರ ಜೊತೆ ನನ್ನ ಹೆಂಡತಿ ಹೆಸರಿನಲ್ಲಿ₹ 15 ಲಕ್ಷ ಠೇವಣಿ ಮಾಡಿದರೆ, ಈ ಹಣದಿಂದ ಬರುವ ಬಡ್ಡಿ ನನ್ನ ಆದಾಯಕ್ಕೆ ಸೇರಿಸಿ ತೆರಿಗೆ ಕೊಡ ಬೇಕಾಗುತ್ತದೆಯೇ ತಿಳಿಸಿರಿ. ನನಗೆ 23 ವರ್ಷದ ಮಗ ಇದ್ದಾನೆ.

–ಸಿ.ಎಸ್. ಚಂದ್ರಶೇಖರ್, ಚಿಕ್ಕಮಗಳೂರು

ಉತ್ತರ: ಕಾನೂನಿನಂತೆ ಗಂಡನ ಹಣ ಹೆಂಡತಿ ಹೆಸರಿನಲ್ಲಿ ಠೇವಣಿ ಮಾಡಿದರೆ, ಅಂತಹ ಬಡ್ಡಿ ಆದಾಯವನ್ನು ಗಂಡನ ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ.

1–4–2019ರ ನಂತರ, ಆದಾಯ ತೆರಿಗೆ ಮಿತಿ₹ 5 ಲಕ್ಷಕ್ಕೆ ಏರಿಸಿರುವುದರಿಂದ ನಿಮ್ಮ ಪಿಂಚಣಿ ಆದಾಯ ಮತ್ತು ನಿಮ್ಮಿಬ್ಬರ ಬಡ್ಡಿ ಆದಾಯ₹ 5 ಲಕ್ಷದೊಳಗೆ ಬರುವಲ್ಲಿ, ತೆರಿಗೆ ಬರುವುದಿಲ್ಲ. ನಿಮಗೆ ಸ್ಟ್ಯಾಂಡರ್ಡ್ ಡಿಡಕ್ಷನ್₹ 50,000 ಬಡ್ಡಿ ಆದಾಯ (ಸೆಕ್ಷನ್ 88TTB)₹ 50,000 ವಿನಾಯಿತಿ ಇರುವುದರಿಂದ, ಪಿಂಚಣಿ ಹಾಗೂ ಠೇವಣಿ ಬಡ್ಡಿ (ನಿಮ್ಮಿಬ್ಬರಿಂದ)₹ 6 ಲಕ್ಷ ದಾಟುವ ತನಕ ಆದಾಯ ತೆರಿಗೆ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.