ADVERTISEMENT

ತೆರಿಗೆ ಉಳಿಸಲು ಗೃಹಸಾಲ ಪಡೆಯುವುದು ಉತ್ತಮವೇ?

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:30 IST
Last Updated 4 ಡಿಸೆಂಬರ್ 2018, 19:30 IST
T
T   

ನಾನು ಪದವಿ ಕಾಲೇಜಿನಲ್ಲಿ ಅಸಿಸ್ಟಂಟ್‌ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತೇನೆ. ಪ್ರತೀ ತಿಂಗಳೂ₹ 27,000 ಆದಾಯ ತೆರಿಗೆ ಕೊಡುತ್ತೇನೆ. ತಿಂಗಳಿಗೆ ಮ್ಯೂಚುವಲ್ ಫಂಡ್‌ನ ‘ಸಿಪ್‌’ನಲ್ಲಿ₹ 10,000 ತೊಡಗಿಸುತ್ತಿದ್ದೇನೆ. LICಯಲ್ಲಿ ₹ 5600 ತಿಂಗಳಿಗೆ ತುಂಬುತ್ತೇನೆ. ನನಗೆ 13 ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇವರ ಭವಿಷ್ಯಕ್ಕೆ ಉಳಿತಾಯ ಯೋಜನೆ ತಿಳಿಸಿ.ನಾನು ತೆರಿಗೆ ಉಳಿಸಲು ಗೃಹಸಾಲ ಪಡೆಯುವುದು ಉತ್ತಮವೇ?

–ಹೆಸರು ಬೇಡ, ಧಾರವಾಡ

ಉತ್ತರ: ಪ್ರಾಯಶಃ ನೀವು ಸೆಕ್ಷನ್ 80C ಆಧಾರದ ಮೇಲೆ ವಾರ್ಷಿಕ ಗರಿಷ್ಠ₹ 1.50 ಲಕ್ಷ ಉಳಿಸುತ್ತಿರಬೇಕು. ಷೇರು ಮಾರುಕಟ್ಟೆ ಹೂಡಿಕೆ ಊಹಾಪೋಹ ಗಳಿಂದ ಕೂಡಿದ್ದು, ಇಲ್ಲಿ ನಿಶ್ಚಿತ ವರಮಾನ ಬರಲೇ ಬೇಕೆಂದಿಲ್ಲ. ನೀವು ಈಗಾಗಲೇ ಮಾಡಿರುವ SIP ನಿಮ್ಮ ನಿರೀಕ್ಷೆಯಂತೆ ಉತ್ತಮ ವರಮಾನ ತರುತ್ತಿದ್ದರೆ ಮಾತ್ರ ಮುಂದುವರೆಸಿ. ಇಲ್ಲಿ ನಷ್ಟ ಅನುಭವಿಸುವ ಸಂದರ್ಭ ಬಂದರೆ ಅದೇ ₹10,000 ತಿಂಗಳು ತುಂಬುವ ಆರ್.ಡಿ. ಮಾಡಿ ನಿಶ್ಚಿಂತೆಯಿಂದ ಜೀವಿಸಿ.

ADVERTISEMENT

ನಿಮ್ಮ ಎರಡನೆ ಮಗನಿಗೆ LIC ಯವರ ಹೊಸ ಚಿಲ್ಟ್ರನ್ ಮನೀ ಬ್ಯಾಂಕ್ ಪ್ಲ್ಯಾನ್‌ನಲ್ಲಿ ವಾರ್ಷಿಕವಾಗಿ₹ 25,000 ತುಂಬಿ ಇದು ಮಗುವಿನ ವಿದ್ಯಾಭ್ಯಾಸಕ್ಕೆ ಹಂತ ಹಂತವಾಗಿ ಸ್ಪಂದಿಸುತ್ತದೆ. ಎರಡನೆ ಮಗನಿಗೆ₹ 3000 ಆರ್.ಡಿ., 10 ವರ್ಷಗಳ ಅವಧಿಗೆ ಮಾಡಿ. ನೀವು ಗೃಹಸಾಲದಿಂದ ಮನೆಕೊಳ್ಳುವಲ್ಲಿ, ಸಾಲದ ಬಡ್ಡಿಯಲ್ಲಿ ಗರಿಷ್ಠ₹ 2 ಲಕ್ಷ ಸೆಕ್ಷನ್ 24 (B) ಆಧಾರದ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಪಡೆಯಬಹುದು. ಸಾಧ್ಯವಾದರೆ ನಿವೇಶನ ಖರೀದಿಸಿ. ಇದರಲ್ಲಿ ತೆರಿಗೆ ಲಾಭವಿಲ್ಲವಾದರೂ ದೀರ್ಘಾವಧಿಯಲ್ಲಿ ನಿಮಗೆ ನಂಬಲಾರದ ಉತ್ತಮ ವರಮಾನವು ಬರುವುದರಲ್ಲಿ ಸಂಶಯವಿಲ್ಲ.

**

ರಾಜ್ಯ ಸರ್ಕಾರದ ‘ಸಿ’ ದರ್ಜೆಯ ನೌಕರ. ಖಾಲಿ ನಿವೇಶನವಿದೆ, ಮನೆ ಇಲ್ಲ. ನನ್ನ ಪಾಲಿಗೆ ಬಂದಿರುವತಾಯಿಯ ಹೆಸರಿನಲ್ಲಿ ಖಾತೆ ಇರುವ ₹ 20 ಲಕ್ಷ ಬೆಲೆ ಬಾಳುವ ಕೃಷಿ ಜಮೀನನ್ನು ಮಾರಾಟಕ್ಕಿಟ್ಟಿದ್ದೇನೆ. ಅದರಿಂದ ಬರುವ ಮೊತ್ತವನ್ನು ತೆರಿಗೆ ಮುಕ್ತವಾಗಿ ಹೇಗೆ ಹೂಡಿಕೆ ಮಾಡಬಹುದು. ಬೆಂಗಳೂರು ನಗರದಲ್ಲಿ ಪತ್ನಿಗೆ ಅವರ ತಂದೆಯಿಂದ ಬಂದಿರುವ ಖಾಲಿ ನಿವೇಶನದಲ್ಲಿ ಬ್ಯಾಂಕಿನಿಂದ ಸಾಲ ಪಡೆದು ಬಾಡಿಗೆ ನೀಡುವ ಉದ್ದೇಶಕ್ಕೆ ಮನೆ ಕಟ್ಟಿಸುವ ಆಲೋಚನೆ ಇದೆ. ಕೃಷಿ ಜಮೀನು ಮಾರಿ ಬಂದ ಹಣವನ್ನು ಅಲ್ಲಿ ಹೂಡಿಕೆ ಮಾಡಿದರೆ ಯಾವ ಆಧಾರದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ?

–ಶಿವಪ್ಪ.ಕೆ.ಆರ್., ಕಲ್ಕುಂಟೆ ಅಗ್ರಹಾರ

ಉತ್ತರ: Capital Gain Tax Sec 48 ಆಧಾರದ ಮೇಲೆ ಹಳ್ಳಿಯ ವ್ಯವಸಾಯದ ಭೂಮಿ (Rural Agriclutural Land) ಮಾರಾಟ ಮಾಡಿ ಬಂದ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಕೃಷಿ ಆದಾಯಕ್ಕೂ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಕೃಷಿ ಜಮೀನು ಮಾರಾಟ ಮಾಡಿ ಪಡೆಯುವ₹ 20 ಲಕ್ಷ ತೆರಿಗೆ ಮುಕ್ತವಾಗಿದೆ.

ಜಮೀನು ಮಾರಾಟ ಮಾಡಿ ಬಂದ ಹಣವನ್ನು, ಬೆಂಗಳೂರಿನಲ್ಲಿ ನಿಮ್ಮ ಹೆಂಡತಿ ಹೆಸರಿನಲ್ಲಿರುವ ನಿವೇಶನದಲ್ಲಿ ಬಾಡಿಗೆ ಮನೆ ಕಟ್ಟಿಸಲು ಉಪಯೋಗಿಸಿದರೂ ತೆರಿಗೆ ಬರುವುದಿಲ್ಲ. ಕೃಷಿ ಜಮೀನು ಮಾರಾಟ ಮಾಡಬೇಡಿ. ಬ್ಯಾಂಕ್‌ ಸಾಲದಿಂದ ಬೆಂಗಳೂರಿನಲ್ಲಿ ಮನೆ ನಿರ್ಮಿಸಿ. ಇದರಿಂದ ನಿಮ್ಮ ಕೃಷಿ ಜಮೀನು ಉಳಿಸಿಕೊಂಡಂತಾಗುತ್ತದೆ. ಜೊತೆಗೆ ಖಾಲಿ ಜಾಗದಲ್ಲಿ ಮನೆ ಕಟ್ಟಿದಂತೆ ಕೂಡಾ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.