ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಖಾಸಗಿ ವಲಯದಿಂದ ಆಗುವ ಬಂಡವಾಳ ವೆಚ್ಚದ ಪ್ರಮಾಣ ಶೇ 21.5ರಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಲೇಖನವೊಂದು ಹೇಳಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಅಂದಾಜು ₹2,20,132 ಕೋಟಿ ಬಂಡವಾಳ ವೆಚ್ಚ ಆಗಿದೆ. ಈ ಬಾರಿ ₹2,67,432 ಕೋಟಿ ಬಂಡವಾಳ ವೆಚ್ಚ ಆಗಬಹುದು ಎಂದು ಲೇಖನವು ಅಂದಾಜು ಮಾಡಿದೆ.
ಜಿಡಿಪಿ ಹೆಚ್ಚಳ, ನಿರುದ್ಯೋಗ ಮತ್ತು ಹಣದುಬ್ಬರ ದರ ಇಳಿಕೆ ಹಾಗೂ ರೆಪೊ ದರ ಕಡಿತವು ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಲಿವೆ ಎಂದು ಹೇಳಿದೆ.
ಜಾಗತಿಕ ಅನಿಶ್ಚಿತತೆಯ ನಡುವೆಯೂ ದೇಶದ ಕಂಪನಿಗಳು ಆರೋಗ್ಯಕರ ಹಣಕಾಸಿನ ಸ್ಥಿತಿ ಹೊಂದಿವೆ. ಹೆಚ್ಚಿದ ನಗದು ಲಭ್ಯತೆ, ಲಾಭದಾಯಕತೆಯ ಹೆಚ್ಚಳ ಕಂಡುಬಂದಿದೆ ಎಂದು ‘ಖಾಸಗಿ ಕಂಪನಿಗಳ ಹೂಡಿಕೆ: 2024–25ರಲ್ಲಿ ಬೆಳವಣಿಗೆ ಮತ್ತು 2025–26ರ ಮುನ್ನೋಟ’ದ ಲೇಖನದಲ್ಲಿ ಬರೆಯಲಾಗಿದೆ.
ಜಾಗತಿಕ ರಾಜಕೀಯ ಬಿಕ್ಕಟ್ಟು, ಅನಿಶ್ಚಿತತೆ, ಬೇಡಿಕೆ ಇಳಿಕೆ ಆಗುತ್ತಿರುವುದು ಹೂಡಿಕೆಯ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.