ADVERTISEMENT

PSB: ಉನ್ನತ ಹುದ್ದೆಗೆ ಖಾಸಗಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಮುಂದಾದ ಸರ್ಕಾರ

ಪಿಟಿಐ
Published 10 ಅಕ್ಟೋಬರ್ 2025, 15:29 IST
Last Updated 10 ಅಕ್ಟೋಬರ್ 2025, 15:29 IST
   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಬಿ) ಆಡಳಿತ ಮಂಡಳಿಯ ಉನ್ನತ ಹುದ್ದೆಗೆ ಖಾಸಗಿ ವಲಯದ ಹಣಕಾಸು ಸಂಸ್ಥೆಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಪ್ರಸ್ತುತ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ನಾಲ್ಕು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳಿವೆ. ಈ ಪೈಕಿ ಒಂದು ಹುದ್ದೆಗೆ ಖಾಸಗಿ ವಲಯದ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲಿದೆ. 

ಇಲ್ಲಿಯವರೆಗೆ, ಬ್ಯಾಂಕ್‌ನ ಎಲ್ಲಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನಗಳನ್ನು ಆಂತರಿಕವಾಗಿ ತುಂಬಿಕೊಳ್ಳಲಾಗುತ್ತಿತ್ತು. 

ADVERTISEMENT

ನೇಮಕಾತಿ ಕುರಿತ ಸಂಪುಟ ಸಮಿತಿಯ (ಎಸಿಸಿ) ಪರಿಷ್ಕೃತ ನೇಮಕಾತಿ ಮಾರ್ಗಸೂಚಿಗಳ ಪ್ರಕಾರ, ಎಸ್‌ಬಿಐ ಹೊರತುಪಡಿಸಿ 11 ಸರ್ಕಾರಿ ವಲಯದ ಬ್ಯಾಂಕ್‌ಗಳ ಒಂದು ಕಾರ್ಯನಿರ್ವಾಹಕ ನಿರ್ದೇಶಕ (ಇ.ಡಿ) ಸ್ಥಾನಕ್ಕೆ ಖಾಸಗಿ ವಲಯದಿಂದ ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಿದೆ.  

ವಿರೋಧ 

ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲಿ ಉನ್ನತ ಹುದ್ದೆಗಳನ್ನು ಖಾಸಗಿ ವಲಯದ ಅಭ್ಯರ್ಥಿಗಳಿಗೆ ತೆರೆದಿಡುವ ಸರ್ಕಾರದ ನಿರ್ಧಾರದ ವಿರುದ್ಧ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕ್ರಮವು ರಾಷ್ಟ್ರೀಯ ಸಂಸ್ಥೆಗಳ ಮೇಲಿನ ದಾಳಿ ಮತ್ತು ಖಾಸಗೀಕರಣಕ್ಕೆ ಸಮನಾಗಿದೆ ಎಂದು ಹೇಳಿದೆ.

ಕಾಯ್ದೆಗಳಿಗೆ ಯಾವುದೇ ತಿದ್ದುಪಡಿ ಮಾಡದೆ ಈ ಮಾರ್ಗಸೂಚಿ ಹೊರಡಿಸಲಾಗಿದೆ. ಇದು ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಹೀಗಾಗಿ, ಪರಿಷ್ಕೃತ ಮಾರ್ಗಸೂಚಿಗಳನ್ನು ಸಮಗ್ರ ಪರಿಶೀಲನೆಯವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.