ADVERTISEMENT

ಪ್ರಶ್ನೋತ್ತರ: ಬ್ಯಾಂಕು ಭದ್ರತೆ ಮತ್ತು ಹೂಡಿಕೆ

ಉತ್ತರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ಪುರಾಣಿಕ್
ಪುರಾಣಿಕ್   

ಕೆ. ನಾಗರಾಜ್, ಬೆಂಗಳೂರು

ನಾನು ಚರಣ್ ಕೋ ಅಪರೇಟಿವ್ ಬ್ಯಾಂಕಿನಲ್ಲಿ ₹ 3 ಲಕ್ಷವನ್ನು ಶೇ 9ರ ಬಡ್ಡಿ ದರದಲ್ಲಿ 48 ತಿಂಗಳ ಅವಧಿಗೆ ಇರಿಸಿದ್ದೇನೆ. ಈ ಬ್ಯಾಂಕು ಭದ್ರವಾಗಿದೆಯಾ ಹಾಗೂ ಆರ್‌ಬಿಐನ ಕಂಟ್ರೋಲ್ ಇದೆಯೇ. ಕೆಲವರು ಕೋ ಆಪರೇಟಿವ್ ಬ್ಯಾಂಕಿನಲ್ಲಿ ಠೇವಣಿಗೆ ಭದ್ರತೆ ಇರುವುದಿಲ್ಲ ಎನ್ನುವುದು ಸರಿಯೇ?

ಉತ್ತರ: ಬ್ಯಾಂಕುಗಳಲ್ಲಿ ರಾಷ್ಟ್ರೀಕೃತ, ಖಾಸಗಿ, ವಿದೇಶಿ ಹಾಗೂ ಸಹಕಾರಿ ಕ್ಷೇತ್ರದ ಬ್ಯಾಂಕುಗಳನ್ನು (ಚರಣ್ ಕೋ ಆಪರೇಟಿವ್ ಬ್ಯಾಂಕ್ ಸಮೇತ) ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ನನಗೆ ತಿಳಿದಂತೆ ಚರಣ್ ಸಹಕಾರಿ ಬ್ಯಾಂಕು ಒಂದು ಉತ್ತಮ ಸಹಕಾರಿ ಬ್ಯಾಂಕ್‌ ಆಗಿದೆ. ಇದಕ್ಕೆ ಒಳ್ಳೆಯ ಹೆಸರಿದೆ. ಕೋ ಆಪರೇಟೀವ್ ಬ್ಯಾಂಕುಗಳಲ್ಲಿ ಭದ್ರತೆ ಇಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾದ ವಿಚಾರ.

ADVERTISEMENT

***

ನಾಗೇಶ, ಕುಮಟಾ

ನಿವೃತ್ತ ಅಧ್ಯಾಪಕ, ವಯಸ್ಸು 81. ನನ್ನ ಉಳಿತಾಯ ಖಾತೆಯಲ್ಲಿ ಸ್ವಲ್ಪ ದೊಡ್ಡ ಮೊತ್ತವಿದೆ. ನನಗೆ ₹ 20,118 ಪಿಂಚಣಿ ಬರುತ್ತದೆ. ಹೆಚ್ಚಿನ ಬಡ್ಡಿ ಬರಲು ಠೇವಣಿ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಉತ್ತರ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬಡ್ಡಿ ಬರುವುದರಿಂದ ಇಲ್ಲಿ ಗರಿಷ್ಠ₹ 10,000 ಉಳಿಸಿರಿ. ಉಳಿದ ಹಣ ನಿಮ್ಮ ಮನೆಗೆ ಸಮೀಪದ ಅಂಚೆ ಕಚೇರಿಯಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ಠೇವಣಿ ಇರಿಸಿರಿ. ಇಲ್ಲಿ ಇಂದಿನ ಬಡ್ಡಿ ದರ ಶೇ 8.7. ಇಲ್ಲಿ ಗರಿಷ್ಠ₹ 15 ಲಕ್ಷಗಳ ತನಕ ಠೇವಣಿ ಇರಿಸಬಹುದು. ಠೇವಣಿ ಅವಧಿ 5 ವರ್ಷ. ಶೇ 8.7ರಷ್ಟು ಬಡ್ಡಿ ಬೇರೆ ಬ್ಯಾಂಕುಗಳಲ್ಲಿ ಸಿಗಲಾರದು. ಭದ್ರತೆ ಕೂಡಾ ಇಲ್ಲಿ ಇದೆ. ಬಡ್ಡಿ ಹಣ ಪ್ರತೀ ಮೂರು ತಿಂಗಳಿಗಳಿಗೊಮ್ಮೆ ನಿಮ್ಮ ಉಳಿತಾಯ ಖಾತೆಗೆ ಜಮಾ ಆಗುತ್ತದೆ.

***

ಹೆಸರು, ಊರು ಬೇಡ

ನಾನು ಕೇಂದ್ರ ಸರ್ಕಾರದ ನಿವೃತ್ತ ನೌಕರ. ವಯಸ್ಸು 75. ನಾನು ಮ್ಯೂಚುವಲ್ ಫಂಡ್‌ನಲ್ಲಿ₹ 20 ಲಕ್ಷ ಇರಿಸಿದ್ದೇನೆ. ಈ ಮ್ಯೂಚುವಲ್ ಫಂಡ್‌ನ ಹೂಡಿಕೆ ಯಥಾಸ್ಥಿತಿಯಲ್ಲಿ ನನ್ನ ಮಗಳ ಹೆಸರಿಗೆ ವರ್ಗಾಯಿಸುವ ಮಾರ್ಗ ತಿಳಿಸಿರಿ.

ಉತ್ತರ: ನೀವು ಹೂಡಿರುವ ಮ್ಯೂಚುವಲ್ ಫಂಡ್‌ನ ಯೂನಿಟ್ಟುಗಳಿಗೆ ಮಗಳಿಗೆ ನಾಮನಿರ್ದೇಶನ ಮಾಡಬಹುದು. ಯಥಾಸ್ಥಿತಿಯಲ್ಲಿ ವರ್ಗಾಯಿಸಲು ಬರುವುದಿಲ್ಲ. ವರ್ಗಾಯಿಸಲೇ ಬೇಕು ಎಂಬುದಾದರೆ, ಮಗಳ ಹೆಸರಿಗೆ ಮಾರಾಟ ಮಾಡಿದ ಹಾಗೆ ಮಾಡಿ ವರ್ಗಾಯಿಸಬಹುದು.

***

ಶಂಭುಗೌಡ, ರಾಮನಗರ

ನಾನು ನಿವೃತ್ತ ಶಿಕ್ಷಕ. ವಯಸ್ಸು 63, ವಾರ್ಷಿಕ ಪಿಂಚಣಿ₹ 2,44,412. ಮನೆ ಬಾಡಿಗೆ ವಾರ್ಷಿಕ₹ 6,000. ಬ್ಯಾಂಕ್ ಬಡ್ಡಿ₹ 75,296. ಪಿತ್ರಾರ್ಜಿತ ಕೃಷಿ ಭೂಮಿಯಿಂದ ವೆಚ್ಚ ಕಳೆದು₹ 1,76,885 ಬಂದಿದೆ. ಠೇವಣಿ ಬಡ್ಡಿಯಿಂದ₹ 7,637 ಕಡಿತವಾಗಿದೆ. ನನಗೆ ನಿಮ್ಮ ಮಾರ್ಗದರ್ಶನ ಬೇಕಾಗಿದೆ.

ಉತ್ತರ: ನೀವು ಪ್ರತಿ ವರ್ಷ ಏಪ್ರಿಲ್ 15 ರೊಳಗೆ 15 H ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿ, ತೆರಿಗೆ ಮುರಿಯದಂತೆ (TDS) ನೋಡಿಕೊಳ್ಳಿ. ಈಗಾಗಲೇ ಮುರಿದ ತೆರಿಗೆ IT Return ತುಂಬಿ ವಾಪಸ್ ಪಡೆಯಿರಿ. ಕೃಷಿ ಆದಾಯವು ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಪಡೆದಿದೆ. ಮನೆ ಬಾಡಿಗೆಯಲ್ಲಿ ತೆರಿಗೆ ಮುರಿದು ಶೇ 30 ರಷ್ಟು ಕಳೆದು ಉಳಿದ ಹಣ ಮಾತ್ರ ಒಟ್ಟು ಆದಾಯಕ್ಕೆ ಸೇರಿಸಿರಿ. (24 (a) ಅದೇ ರೀತಿ ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ₹ 50,000 ನಿಮ್ಮ ಆದಾಯ ಕಳೆದು ತೆರಿಗೆ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.