ADVERTISEMENT

ಮೀಸಲು ನಿಧಿಯ ಅವಲಂಬನೆ ಸರ್ಕಾರದ ಹತಾಶೆಯ ಪ್ರತೀಕ

ಆರ್‌ಬಿಐ ಮಾಜಿ ಗವರ್ನರ್‌ ಸುಬ್ಬರಾವ್‌ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:15 IST
Last Updated 2 ಆಗಸ್ಟ್ 2019, 20:15 IST
   

ಮುಂಬೈ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯನ್ನು ಕೇಂದ್ರ ಸರ್ಕಾರವು ಅವಲಂಬಿಸಿರುವುದು ಅದರ ಹತಾಶೆಯ ಪ್ರತೀಕವಾಗಿದೆ’ ಎಂದು ಆರ್‌ಬಿಐನ ಮಾಜಿ ಗವರ್ನರ್‌ ಡಿ. ಸುಬ್ಬರಾವ್‌ ಬಣ್ಣಿಸಿದ್ದಾರೆ.

ಆರ್‌ಬಿಐ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯ ಮೌಲ್ಯ ನಿಗದಿಪಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದೂ ಎಚ್ಚರಿಸಿದ್ದಾರೆ. ‘ವಿಶ್ವದ ಯಾವುದೇ ಭಾಗದಲ್ಲಿನ ಸರ್ಕಾರಗಳು ಕೇಂದ್ರೀಯ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯನ್ನು ಅವಲಂಬಿಸಲು ಮುಂದಾಗುವುದು ಒಳ್ಳೆಯ ಸಂಗತಿಯಲ್ಲ. ಇದು ಸರ್ಕಾರಗಳ ಹತಾಶೆಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸರ್ಕಾರದ ಇಂತಹ ಹತಾಶ ಪ್ರಯತ್ನವನ್ನು ವಿರೋಧಿಸುವ ತಮ್ಮ ನಿಲುವಿಗೆ ಪೂರಕವಾಗಿ ಅವರು 2008ರಲ್ಲಿ ಘಟಿಸಿದ್ಧ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭವನ್ನು ಅವರು ನಿದರ್ಶನವನ್ನಾಗಿ ನೀಡಿದ್ದಾರೆ. ಆ ಸಂದರ್ಭದಲ್ಲಿ ವಿಶ್ವದ ಇತರ ಕೇಂದ್ರೀಯ ಬ್ಯಾಂಕ್‌ಗಳಿಗಿಂತ, ಆರ್‌ಬಿಐ ಆ ಗಂಡಾಂತರವನ್ನು ವಿಭಿನ್ನ ನೆಲೆಯಲ್ಲಿ ನಿರ್ವಹಿಸಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಆರ್‌ಬಿಐ ಹೊಂದಿರಬಹುದಾದ ಹೆಚ್ಚುವರಿ ಮೀಸಲು ನಿಧಿಯ ಪ್ರಮಾಣ ನಿರ್ಧರಿಸಲು ರಚಿಸಲಾಗಿರುವ ಬಿಮಲ್‌ ಜಲನ್‌ ಸಮಿತಿಯು ವರದಿಗೆ ಅಂತಿಮ ಸ್ವರೂಪ ನೀಡುವ ಹಂತದಲ್ಲಿ ಇರುವಾಗ ಸುಬ್ಬರಾವ್‌ ಅವರು ಈ ಟೀಕೆ ಮಾಡಿದ್ದಾರೆ.

ಹೆಚ್ಚುವರಿ ಮೀಸಲು ನಿಧಿಯನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಮತ್ತು ಸರ್ಕಾರದ ಮಧ್ಯೆ ಸಂಘರ್ಷ ನಡೆದಿದೆ. ಇದೇ ಕಾರಣಕ್ಕೆ ಗವರ್ನರ್ ಉರ್ಜಿತ್‌ ಪಟೇಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

‘ವಿದೇಶಿ ಹೂಡಿಕೆದಾರರು ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿಯನ್ನು ಪರಿಗಣಿಸಿ ಹಣ ತೊಡಗಿಸುತ್ತಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಕೊಡಮಾಡುವ ಸಂಕಷ್ಟದ ಕಾಲದ ಸಾಲಕ್ಕೂ ಇದು ಅನ್ವಯಿಸುತ್ತದೆ. ಜಲನ್‌ ಸಮಿತಿಯು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ತುಂಬ ಎಚ್ಚರಿಕೆವಹಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ಬಳಿ ₹ 9 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ನಿಧಿ ಇದೆ ಎನ್ನುವ ಅಂದಾಜಿದೆ. ಜಲನ್‌ ಸಮಿತಿಯು, ಮೂರು ವರ್ಷಗಳವರೆಗೆ ₹ 1.5 ಲಕ್ಷ ಕೋಟಿಯಿಂದ ₹ 3 ಲಕ್ಷ ಕೋಟಿವರೆಗೆ ಹಂತ ಹಂತವಾಗಿ ಸರ್ಕಾರಕ್ಕೆ ವರ್ಗಾಯಿಸುವ ಶಿಫಾರಸು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

‘ವಿದೇಶಿ ಬಾಂಡ್‌ ಇರಲಿ’
ವಿದೇಶಿ ಬಾಂಡ್‌ಗಳ ಬಗ್ಗೆ ಆರ್‌ಬಿಐನ ಮಾಜಿ ಗವರ್ನರ್‌ಗಳಾದ ವೈ. ವಿ. ರೆಡ್ಡಿ ಮತ್ತು ರಘುರಾಂ ರಾಜನ್‌ ಅವರು ತಳೆದಿರುವ ನಿಲುವಿಗೆ ಸುಬ್ಬರಾವ್‌ ಅವರು ವ್ಯತಿರಿಕ್ತ ಧೋರಣೆ ಹೊಂದಿದ್ದಾರೆ.

‘ವಿದೇಶಿ ಕರೆನ್ಸಿಗಳ ರೂಪದಲ್ಲಿ ಸಾಲ ಪಡೆಯುವ ಸರ್ಕಾರದ ಹೊಸ ಆಲೋಚನೆಯು ಒಂದು ಬಾರಿ ಪರೀಕ್ಷೆಗೆ ಒಳಪಡಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.