ADVERTISEMENT

ನಗದುರಹಿತ ವಹಿವಾಟಿಗೆ ಉತ್ತೇಜನ: ಆರ್‌ಬಿಐ

ಪಿಟಿಐ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST
ಡಿಜಿಟಲ್‌ ಪಾವತಿ
ಡಿಜಿಟಲ್‌ ಪಾವತಿ   

ಮುಂಬೈ : ನಗದುರಹಿತ (ಡಿಜಿಟಲ್‌) ಪಾವತಿ ವ್ಯವಸ್ಥೆ ಉತ್ತೇಜಿಸುವುದು ತನ್ನ ಧ್ಯೇಯವಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರದ ದಿನಗಳಲ್ಲಿ ₹ 3.5 ಲಕ್ಷ ಕೋಟಿ ಮೊತ್ತದ ನೋಟುಗಳ ಚಲಾವಣೆ ಕಡಿಮೆಯಾಗಿದೆ. ಇದರಿಂದ ಉತ್ತೇಜನಗೊಂಡಿರುವ ಆರ್‌ಬಿಐ, ‘ನಗದು ದೊರೆ. ಆದರೆ, ನಗದುರಹಿತ ವಹಿವಾಟು (ಡಿಜಿಟಲ್‌ ಪಾವತಿ) ದೈವಿಕ ಸ್ವರೂಪದ್ದು’ ಎನ್ನುವ ಹೊಸ ಧ್ಯೇಯ ಅನುಷ್ಠಾನಗೊಳಿಸಲು ಆದ್ಯತೆ ನೀಡುವುದಾಗಿ ತಿಳಿಸಿದೆ.

ದೇಶದಲ್ಲಿನ ನಗದು ಪಾವತಿಯನ್ನು ಖಚಿತವಾಗಿ ಅಳೆಯಲು ಬರುವುದಿಲ್ಲ. ಆದರೆ, ಡಿಜಿಟಲ್‌ ಪಾವತಿಯಲ್ಲಿನ ಪ್ರಗತಿಯನ್ನು ಕರಾರುವಾಕ್ಕಾಗಿ ಅಳೆಯಬಹುದು. ಐದು ವರ್ಷಗಳಲ್ಲಿ ರಿಟೇಲ್‌ ಡಿಜಿಟಲ್‌ ಪಾವತಿಯು ಪ್ರಮಾಣ ಮತ್ತು ಮೌಲ್ಯದಲ್ಲಿ ಕ್ರಮವಾಗಿ ಶೇ 61ರಷ್ಟು ಮತ್ತು ಶೇ 19ರಷ್ಟು ಏರಿಕೆ ಕಂಡಿದೆ. ಇದು ಡಿಜಿಟಲ್‌ ಪಾವತಿಯ ಜನಪ್ರಿಯತೆಯನ್ನು ಸೂಚಿಸುತ್ತದೆ.

ADVERTISEMENT

ನಗದು ಬಳಕೆ ಈಗಲೂ ಗರಿಷ್ಠ ಪ್ರಮಾಣದಲ್ಲಿ ಇದೆ. ಸಂಪತ್ತನ್ನು ಸಂಗ್ರಹಿಸುವ ರೂಪದಲ್ಲಿ ಅದನ್ನು ಹೆಚ್ಚಾಗಿ ಬಳಸಲಾಗುತ್ತಿದೆಯೇ ಹೊರತು ಪಾವತಿ ಉದ್ದೇಶಕ್ಕೆ ಅಲ್ಲ. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಪರಿಣಾಮವಾಗಿ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು 2018–19ರಲ್ಲಿ ಜಿಡಿಪಿಯ ಶೇ 11.2ಕ್ಕೆ ಇಳಿದಿದೆ. ಇದು ನೋಟು ರದ್ದತಿ ಮುಂಚಿನ (2015–16) ಶೇ 12.1ಕ್ಕಿಂತ ಕಡಿಮೆ ಇದೆ. ನಗದು ಬಳಕೆಯಿಂದ ಜನರು ಕ್ರಮೇಣ ದೂರ ಸರಿಯುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಡಿಜಿಟಲ್‌ ಪಾವತಿಯ ಭವಿಷ್ಯವನ್ನು ಈ ವ್ಯವಸ್ಥೆಯ ವೇಗ, ಅನುಕೂಲತೆ ಮತ್ತು ಸ್ಪರ್ಧೆಗಳು ನಿರ್ಧರಿಸಲಿವೆ. ಡಿಜಿಟಲ್‌ ಪಾವತಿಯು ಬಳಕೆದಾರರಿಗೆ ದೈವಿಕ ಅನುಭವ ನೀಡುವಂತೆ ಮಾಡುವುದು ತನ್ನ ಉದ್ದೇಶವಾಗಿದೆ ಎಂದು ಕೇಂದ್ರೀಯ ಬ್ಯಾಂಕ್‌ನ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.