ADVERTISEMENT

ಆರ್‌ಬಿಐ: ಯುಪಿಐ ವಹಿವಾಟಿಗೆ ಶುಲ್ಕ?

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:55 IST
Last Updated 18 ಆಗಸ್ಟ್ 2022, 15:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜನಪ್ರಿಯವಾಗಿರುವ ಯುಪಿಐ ಪಾವತಿ ವ್ಯವಸ್ಥೆ, ಆರ್‌ಟಿಜಿಎಸ್‌, ನೆಫ್ಟ್‌, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ನಡೆಸುವ ಪಾವತಿಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸಬಹುದೇ ಎಂಬ ಬಗ್ಗೆ ಅಕ್ಟೋಬರ್ 3ಕ್ಕೆ ಮೊದಲು ಅಭಿಪ್ರಾಯ ತಿಳಿಸುವಂತೆ ಆರ್‌ಬಿಐ ಕೋರಿದೆ.

ಈ ಪಾವತಿಗಳಿಗೆ ಶುಲ್ಕ ವಿಧಿಸುವಿಕೆ ಶುರುವಾದರೆ, ದೇಶದಲ್ಲಿ ಡಿಜಿಟಲ್ ಪಾವತಿಗಳ ಜನಪ್ರಿಯತೆಗೆ ಅಡ್ಡಿ ಎದುರಾಗಬಹುದು ಹಾಗೂ ಜನ ನಗದು ಬಳಕೆ ಹೆಚ್ಚು ಮಾಡಬಹುದು ಎಂಬ ವಾದ ಇದೆ.

ಹಣ ವರ್ಗಾವಣೆಯ ರೀತಿಯಲ್ಲಿಯೇ ಡೆಬಿಟ್ ಕಾರ್ಡ್ ವಹಿವಾಟುಗಳಿಗೂ ಶುಲ್ಕ ವಿಧಿಸಬೇಕೇ, ರೂಪೆ ಕಾರ್ಡ್‌ಗಳನ್ನು ಇತರ ಡೆಬಿಟ್‌ ಕಾರ್ಡ್‌ಗಳಿಗಿಂತ ಪ್ರತ್ಯೇಕವಾಗಿ ಕಾಣಬೇಕೇ, ಎಂಡಿಆರ್ ಶುಲ್ಕವು ಏಕರೂಪದ್ದಾಗಿರಬೇಕೇ ಎಂಬ ಪ್ರಶ್ನೆಗಳನ್ನು ಆರ್‌ಬಿಐ ಕೇಳಿದೆ.

ADVERTISEMENT

ಈಗಿನ ನಿಯಮಗಳ ಪ್ರಕಾರ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅಂದರೆ, ಹಣ ಪಾವತಿ ಮಾಡುವವರಿಗೂ ಶುಲ್ಕ ಇಲ್ಲ, ಹಣ ಸ್ವೀಕರಿಸುವವರೂ ಶುಲ್ಕ ಕೊಡಬೇಕಿಲ್ಲ.

ವಹಿವಾಟಿನ ಮೊತ್ತಕ್ಕೆ ಅನುಗುಣವಾಗಿ ಶುಲ್ಕ ಪಡೆಯಬೇಕೇ ಎಂಬ ‍ಪ್ರಶ್ನೆಯನ್ನೂ ಆರ್‌ಬಿಐ ಕೇಳಿದೆ. ‘ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ಶುಲ್ಕವು ಒಂದೇ ಆಗಿರಬೇಕೇ ಅಥವಾ ದೊಡ್ಡ ಮೊತ್ತದ ವಹಿವಾಟುಗಳಿಗೆ ಮಾತ್ರ ಶುಲ್ಕ ವಿಧಿಸಿ, ಸಣ್ಣ ವಹಿವಾಟುಗಳಿಗೆ ಶುಲ್ಕದಿಂದ ವಿನಾಯಿತಿ ನೀಡಬಹುದೇ?’ ಎಂದು ಆರ್‌ಬಿಐ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.