ಮುಂಬೈ: ದೇಶದ ಜಿಡಿಪಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ನಿರೀಕ್ಷೆಗೂ ಮೀರಿ ರೆಪೊ ದರವನ್ನು 50 ಮೂಲಾಂಶದಷ್ಟು ಕಡಿತಗೊಳಿಸಿದೆ.
ರೆಪೊ ದರದಲ್ಲಿ ಶೇ 0.25ರಷ್ಟು ಇಳಿಕೆ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದರು. ನಿರೀಕ್ಷೆಗೂ ಮೀರಿ ಇಳಿಕೆ ಮಾಡಲಾಗಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿದ್ದ ಹಿನ್ನೆಲೆಯಲ್ಲಿ ಈ ಉತ್ತೇಜನ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಈ ಕಡಿತದ ಮೂಲಕ ರೆಪೊ ದರ ಮೂರು ವರ್ಷಗಳಲ್ಲೇ ಕಡಿಮೆ ಮಟ್ಟ ಶೇ 5.5ಕ್ಕೆ ಇಳಿದಿದೆ. ಈ ಮೂಲಕ ಗೃಹ, ಆಟೊಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.
2022ರ ಆಗಸ್ಟ್ 5 ರಂದು ರೆಪೊ ದರವು ಶೇ 5.40ರಷ್ಟಿತ್ತು.
ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕತೆ ಅಭಿವೃದ್ಧಿ ಹಾಗೂ ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ಆರ್‌ಬಿಐನ ಹಣಕಾಸು ನೀತಿ ಸಮಿತಿಯು(ಎಂಪಿಸಿ) ರೆಪೊ ದರದಲ್ಲಿ 50 ಮೂಲಾಂಶದಷ್ಟು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು.
ಈ ವರ್ಷದ ಫೆಬ್ರುವರಿಯಿಂದ ಆರ್‌ಬಿಐ ರೆಪೊ ದರದಲ್ಲಿ 100 ಮೂಲಾಂಶದಷ್ಟು ಕಡಿತ ಮಾಡಿದೆ. ಏಪ್ರಿಲ್‌ನಲ್ಲಿ 25 ಮೂಲಾಂಶ ಕಡಿತಗೊಳಿಸಲಾಗಿತ್ತು. ಆಗ ರೆಪೊ ದರ ಶೇ 6ಕ್ಕೆ ಇಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.