ADVERTISEMENT

ಜೂನ್‌ 2ರಿಂದ ಆರ್‌ಬಿಐ ಸಭೆ: ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

ಪಿಟಿಐ
Published 30 ಮೇ 2021, 12:18 IST
Last Updated 30 ಮೇ 2021, 12:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಹಣದುಬ್ಬರ ಏರಿಕೆ ಮತ್ತು ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಕುರಿತು ಮೂಡಿರುವ ಅನಿಶ್ಚಿತತೆಯಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಜೂನ್‌ 2 ರಿಂದ 4ರವರೆಗೆ ಸಭೆ ನಡೆಸಲಿದ್ದು, ಜೂನ್‌ 4ರಂದು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದೆ.

ಏಪ್ರಿಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಆರ್‌ಬಿಐ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ರೆಪೊ ದರವನ್ನು ಶೇ 4ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ರಿವರ್ಸ್‌ ರೆಪೊ ದರ ಶೇ 3.35ರಷ್ಟಿದೆ.

ADVERTISEMENT

ಲಸಿಕೆ ನೀಡುವಿಕೆಯು ಸುಧಾರಿಸುವವರೆಗೆ 2021 ರ ಬಹುಪಾಲು ಭಾಗಕ್ಕೆ ಆರ್‌ಬಿಐನ ವಿತ್ತೀಯ ನೀತಿಯು ಹೊಂದಾಣಿಕೆಯ ನಿಲುವನ್ನು ಕಾಯ್ದುಕೊಳ್ಳುವ ನಿರೀಕ್ಷೆಯನ್ನು ನಾವು ಮಾಡುತ್ತೇವೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅಧಿತಿ ನಾಯರ್‌ ಹೇಳಿದ್ದಾರೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು2020–21ರಲ್ಲಿ ಇದು ಶೇ 6.2ರಷ್ಟು ಇರುವುದು 2021–22ರಲ್ಲಿ ಶೇ 5.2ಕ್ಕೆ ತಗ್ಗುವ ಅಂದಾಜು ಇದೆ ಎಂದು ಅವರು ತಿಳಿಸಿದ್ದಾರೆ.

ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.29ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು ಮತ್ತು ಏಕದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.