
ಮುಂಬೈ: ನಗರ ಸಹಕಾರಿ ಬ್ಯಾಂಕ್‌ಗಳ ಆರಂಭಕ್ಕೆ ಪರವಾನಗಿ ನೀಡುವುದನ್ನು ಮತ್ತೆ ಶುರು ಮಾಡುವ ಪ್ರಸ್ತಾವನೆಯನ್ನು ಆರ್‌ಬಿಐ ಸಿದ್ಧಪಡಿಸಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ, ಎರಡು ದಶಕಕ್ಕೂ ಹೆಚ್ಚಿನ ಅವಧಿಯ ನಂತರದಲ್ಲಿ ಹೊಸ ನಗರ ಸಹಕಾರಿ ಬ್ಯಾಂಕ್‌ಗಳ ಆರಂಭಕ್ಕೆ ಅವಕಾಶ ಸಿಗಲಿದೆ.
ನಗರ ಸಹಕಾರಿ ಬ್ಯಾಂಕ್‌ಗಳನ್ನು ಆರಂಭಿಸಲು 2004ರ ನಂತರದಲ್ಲಿ ಪರವಾನಗಿ ನೀಡುತ್ತಿಲ್ಲ. ಹೊಸದಾಗಿ ಪರವಾನಗಿ ಪಡೆದಿದ್ದ ಹಲವು ಬ್ಯಾಂಕ್‌ಗಳು ಬಹಳ ಕಡಿಮೆ ಅವಧಿಯಲ್ಲಿ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಕಾರಣಕ್ಕೆ ಆರ್‌ಬಿಐ ಹೊಸದಾಗಿ ಪರವಾನಗಿ ನೀಡದಿರಲು ತೀರ್ಮಾನಿಸಿತ್ತು.
ಕಳೆದ ಎರಡು ದಶಕಗಳಲ್ಲಿ ಈ ವಲಯದಲ್ಲಿ ಕಂಡುಬಂದಿರುವ ಧನಾತ್ಮಕ ಬೆಳವಣಿಗೆಗಳನ್ನು ಪರಿಗಣಿಸಿ, ಸಂಬಂಧಪಟ್ಟವರಿಂದ ಬಂದಿರುವ ಬೇಡಿಕೆಯನ್ನು ಗಮನಿಸಿ, ನಗರ ಸಹಕಾರಿ ಬ್ಯಾಂಕ್‌ಗಳಿಗೆ ಹೊಸದಾಗಿ ಪರವಾನಗಿ ನೀಡುವ ಬಗ್ಗೆ ಸಾರ್ವಜನಿಕ ಸಮಾಲೋಚನಾ ಪತ್ರವನ್ನು ಪ್ರಕಟಿಸಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಈಚೆಗೆ ಹೇಳಿದ್ದರು.
ಈಗ ಈ ವಿಚಾರವಾಗಿ ಮುಂದಡಿ ಇರಿಸಿರುವ ಆರ್‌ಬಿಐ, ‘ನಗರ ಸಹಕಾರಿ ಬ್ಯಾಂಕ್‌ಗಳಿಗೆ ಪರವಾನಗಿ ನೀಡುವುದು’ ಹೆಸರಿನ ಸಮಾಲೋಚನಾ ಪತ್ರವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದಕ್ಕೆ ಸಾರ್ವಜನಿಕರು ಫೆಬ್ರುವರಿ 13ಕ್ಕೆ ಮೊದಲು ಸಲಹೆಗಳನ್ನು ನೀಡಬೇಕಿದೆ.
ಆರ್‌ಬಿಐ ರಚಿಸಿದ ಹಲವು ಉನ್ನತ ಮಟ್ಟದ ಸಮಿತಿಗಳು, ನಗರ ಸಹಕಾರಿ ಬ್ಯಾಂಕ್‌ಗಳಿಗೆ ಮತ್ತೆ ಪರವಾನಗಿ ನೀಡುವ ವಿಚಾರದ ಬಗ್ಗೆ ಪರಿಶೀಲನೆ ನಡೆಸಿವೆ, ಹಲವು ಶಿಫಾರಸುಗಳನ್ನು ನೀಡಿವೆ ಎಂದು ಸಮಾಲೋಚನಾ ಪತ್ರವು ಹೇಳಿದೆ.
ಹೊಸದಾಗಿ ನಗರ ಸಹಕಾರಿ ಬ್ಯಾಂಕ್ ಆರಂಭಕ್ಕೆ ಪರವಾನಗಿ ನೀಡಲು ಇದು ಸರಿಯಾದ ಸಮಯವೇ, ಪರವಾನಗಿ ನೀಡಲು ಈಗ ಮುಂದಾಗಬೇಕು ಎಂದಾದರೆ ಅರ್ಹತಾ ಮಾನದಂಡಗಳು ಏನಿರಬೇಕು ಎಂಬ ಬಗ್ಗೆ ಆರ್‌ಬಿಐ ಸಲಹೆ ಕೇಳಿದೆ.
ವಿಫಲಗೊಂಡ ನಗರ ಸಹಕಾರಿ ಬ್ಯಾಂಕ್‌ಗಳ ಪೈಕಿ ಹೆಚ್ಚಿನವು ಸಣ್ಣ ಗಾತ್ರದವು ಆಗಿದ್ದವು. ಹೀಗಾಗಿ, ಈಗ ಪರವಾನಗಿ ನೀಡುವುದನ್ನು ಆರಂಭಿಸುವುದಾದಲ್ಲಿ ದೊಡ್ಡ ಗಾತ್ರದ ಪತ್ತಿನ ಸಹಕಾರ ಸಂಘಗಳಿಗೆ ಮಾತ್ರ ಅಂತಹ ಪರವಾನಗಿ ನೀಡುವುದು ವಿವೇಕದ ಕ್ರಮವಾಗಬಹುದು ಎಂಬ ಅಂಶವನ್ನೂ ಸಮಾಲೋಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ತಿನ ಸಹಕಾರ ಸಂಘವೊಂದು ನಗರ ಸಹಕಾರಿ ಬ್ಯಾಂಕ್ ಆಗಿ ಪರಿವರ್ತನೆ ಕಾಣಲು ಪರವಾನಗಿಗೆ ಅರ್ಜಿ ಸಲ್ಲಿಸಬೇಕು ಎಂದಾದರೆ ಅದು ಕನಿಷ್ಠ ₹300 ಕೋಟಿ ಬಂಡವಾಳ ಹೊಂದಿರಬೇಕು ಎಂದು ಉಲ್ಲೇಖ ಮಾಡಲಾಗಿದೆ.
ಸಂಘವು ಕಳೆದ 10 ವರ್ಷಗಳಿಂದ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿರಬೇಕು, ಐದು ವರ್ಷಗಳಿಂದ ಒಳ್ಳೆಯ ಹಣಕಾಸಿನ ಸ್ಥಿತಿ ಹೊಂದಿರಬೇಕು ಎಂದು ಹೇಳಲಾಗಿದೆ. 2025ರ ಮಾರ್ಚ್ 31ರ ಹೊತ್ತಿಗೆ ದೇಶದಲ್ಲಿ ಒಟ್ಟು 1,457 ನಗರ ಸಹಕಾರಿ ಬ್ಯಾಂಕ್‌ಗಳು ಇದ್ದವು.