ಮುಂಬೈ (ಪಿಟಿಐ): ಚಿಲ್ಲರೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಡಿಸೆಂಬರ್ 1ರಂದು ಚಾಲನೆ ನೀಡಲಾಗುವುದು ಎಂದು ಆರ್‌ಬಿಐ ಮಂಗಳವಾರ ಹೇಳಿದೆ. ನಾಲ್ಕು ನಗರಗಳಲ್ಲಿ ಇದು ಆರಂಭವಾಗಲಿದ್ದು, ಬೆಂಗಳೂರು ಕೂಡ ಈ ಪೈಕಿ ಒಂದು.
ಆರಂಭಿಕ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ ಸೇರಿದಂತೆ ನಾಲ್ಕು ಬ್ಯಾಂಕ್‌ಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲಿವೆ.
ಆರ್‌ಬಿಐ, ಡಿಜಿಟಲ್ ರೂಪಾಯಿಯ ಬಳಕೆಯನ್ನು ಸಗಟು ವಹಿವಾಟುಗಳಿಗೆ ಪ್ರಾಯೋಗಿಕವಾಗಿ ನವೆಂಬರ್ 1ರಂದು ಚಾಲನೆ ನೀಡಿದೆ. ಈಗ ಆಯ್ದ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ಮಾತ್ರ ಚಿಲ್ಲರೆ ವಹಿವಾಟುಗಳಿಗೆ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಳಕೆಗೆ ಚಾಲನೆ ನೀಡಲಾಗುತ್ತದೆ.
‘ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಇದು ಕಾನೂನುಬದ್ಧ ಕರೆನ್ಸಿಯಾಗಿರುತ್ತದೆ’ ಎಂದು ಆರ್‌ಬಿಐ ಹೇಳಿದೆ. ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್ ಶಾಖೆಗಳ ಮೂಲಕ ವಿತರಿಸಲಾಗುತ್ತದೆ. ಬ್ಯಾಂಕ್‌ಗಳು ನೀಡುವ ಡಿಜಿಟಲ್ ವಾಲೆಟ್‌ಗಳ ಮೂಲಕ ಇದನ್ನು ವಹಿವಾಟಿಗೆ ಬಳಸಿಕೊಳ್ಳಬಹುದು.
ಇಬ್ಬರು ವ್ಯಕ್ತಿಗಳ ನಡುವೆ ಹಾಗೂ ಗ್ರಾಹಕ ಮತ್ತು ವ್ಯಾಪಾರಿ ನಡುವೆ ವಹಿವಾಟುಗಳಿಗೆ ಇದನ್ನು ಬಳಸಬಹುದು. ದಿನನಿತ್ಯದ ವಹಿವಾಟುಗಳಲ್ಲಿ ಬಳಸಿಕೊಳ್ಳುವ ನಗದು ಹಣದ ರೀತಿಯಲ್ಲಿಯೆ, ಡಿಜಿಟಲ್ ರೂಪಾಯಿಯನ್ನು ಠೇವಣಿ ಇರಿಸಲು ಬಳಸಬಹುದು.
ಆರಂಭಿಕವಾಗಿ ಇದು ಬೆಂಗಳೂರು ಮಾತ್ರವಲ್ಲದೆ, ಮುಂಬೈ, ನವದೆಹಲಿ ಮತ್ತು ಭುವನೇಶ್ವರ ನಗರಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.