ADVERTISEMENT

ಮೃತರ ಬ್ಯಾಂಕ್ ಖಾತೆಯಲ್ಲಿನ ಹಣದ ಕ್ಲೇಮ್‌ ಇತ್ಯರ್ಥಕ್ಕೆ ಏಕರೂಪಿ ವ್ಯವಸ್ಥೆ: RBI

ಪಿಟಿಐ
Published 6 ಆಗಸ್ಟ್ 2025, 15:42 IST
Last Updated 6 ಆಗಸ್ಟ್ 2025, 15:42 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಮೃತ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಹಾಗೂ ಅವರ ಹೆಸರಿನ ಲಾಕರ್‌ನಲ್ಲಿ ಇರುವ ಅಮೂಲ್ಯ ವಸ್ತುಗಳ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲು ಏಕರೂಪಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಮೃತ ಗ್ರಾಹಕರು ನಾಮನಿರ್ದೇಶನ ಮಾಡಿರುವ ವ್ಯಕ್ತಿಗಳು ಸಲ್ಲಿಸುವ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ.

‘ಪ್ರಕ್ರಿಯೆಯು ಏಕರೂಪಿ ಆದಾಗ, ಕ್ಲೇಮ್‌ಗಳು ಸರಳವಾಗಿ ಹಾಗೂ ಸುಲಭವಾಗಿ ಇತ್ಯರ್ಥ ಆಗುವ ನಿರೀಕ್ಷೆ ಇದೆ’ ಎಂದು ಮಲ್ಹೋತ್ರಾ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ – 1949ರ ಅನ್ವಯ, ಬ್ಯಾಂಕ್‌ ಠೇವಣಿಗಳಿಗೆ ಹಾಗೂ ಲಾಕರ್‌ಗಳಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ.

ADVERTISEMENT

ನಾಮನಿರ್ದೇಶಿತ ವ್ಯಕ್ತಿಗಳು, ಕಾನೂನುಬದ್ಧ ಹಕ್ಕುದಾರರು ಕ್ಲೇಮ್‌ ಅರ್ಜಿ ಸಲ್ಲಿಸಿದಾಗ ಅದನ್ನು ತ್ವರಿತವಾಗಿ, ಸುಲಭವಾಗಿ ಇತ್ಯರ್ಥಪಡಿಸಲು ಬ್ಯಾಂಕುಗಳು ಸರಳವಾದ ಪ್ರಕ್ರಿಯೆ ರೂಪಿಸಬೇಕು ಎಂದು ಆರ್‌ಬಿಐ ನೀತಿಯು ಹೇಳುತ್ತದೆ. ಆದರೆ ಪ್ರಕ್ರಿಯೆಗಳಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇದೆ.

‘ಗ್ರಾಹಕರಿಗೆ ಒದಗಿಸುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಲ್ಲಿಸಬೇಕಿರುವ ದಾಖಲೆಗಳನ್ನು ನಿರ್ದಿಷ್ಟಪಡಿಸಲು ತೀರ್ಮಾನಿಸಲಾಗಿದೆ. ಈ ದಿಸೆಯಲ್ಲಿ ಕರಡು ಸುತ್ತೋಲೆಯೊಂದನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಶೀಘ್ರವೇ ಹೊರಡಿಸಲಾಗುತ್ತದೆ’ ಎಂದು ಆರ್‌ಬಿಐ ಹೇಳಿದೆ.

ಈಗ ಇಂತಹ ಕ್ಲೇಮ್‌ ಇತ್ಯರ್ಥಪಡಿಸಲು ಬ್ಯಾಂಕ್‌ಗಳು ಕೇಳುವ ದಾಖಲೆಗಳಲ್ಲಿ ಏಕರೂಪ ಇಲ್ಲದಿರಬಹುದು ಎನ್ನಲಾಗಿದೆ. ಅದೇ ರೀತಿ, ನಾಮನಿರ್ದೇಶನ ಇಲ್ಲದ ಖಾತೆಗಳಲ್ಲಿನ ಹಣವನ್ನು ಪಡೆಯುವ ವಿಚಾರದಲ್ಲಿಯೂ ಬೇರೆ ಬೇರೆ ಬ್ಯಾಂಕುಗಳು ಭಿನ್ನತೆಗಳು ಇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.