ADVERTISEMENT

ಹಠಾತ್ ಮಳೆಗೆ ಬೆಳೆ ಹಾನಿ ಆಗಿಲ್ಲ: ಕೇಂದ್ರ ಕೃಷಿ ಇಲಾಖೆ

ಪಿಟಿಐ
Published 22 ಮೇ 2025, 14:30 IST
Last Updated 22 ಮೇ 2025, 14:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಪ್ರಮುಖ ಬೆಳೆಗಳಿಗೆ ಹಾನಿಯಾಗಿಲ್ಲ. ಈ ಮಳೆಯು ಬೇಸಿಗೆಯ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ’ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದ್ದಾರೆ.

ಈ ಹಠಾತ್ ಮಳೆಯಿಂದ ಇಲ್ಲಿಯವರೆಗೆ ಯಾವುದೇ ಹಾನಿ ವರದಿಯಾಗಿಲ್ಲ. ಅಲ್ಲದೇ, ಈ ಮಳೆ ಹೆಸರುಕಾಳು, ಜೋಳ ಮತ್ತು ಭತ್ತದ ಬೆಳೆಗಳಿಗೆ ಅನುಕೂಲವಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಮಾವು ಮತ್ತು ಲಿಚಿ ಹಣ್ಣುಗಳು ಉದುರಿವೆ. ಆದರೆ, ಆಯಾ ರಾಜ್ಯ ಸರ್ಕಾರಗಳು ಈ ಕುರಿತು ಸಚಿವಾಲಯಕ್ಕೆ ವರದಿ ಸಲ್ಲಿಸಿಲ್ಲ ಎಂದರು.

ಜುಲೈನಿಂದ ಪ್ರಾರಂಭವಾಗುವ ಭತ್ತದ ಬಿತ್ತನೆಯ ಸಿದ್ಧತೆ ಪ್ರಗತಿಯಲ್ಲಿದೆ. 2024-25ನೇ ಬೆಳೆ ವರ್ಷದ (ಜುಲೈ-ಜೂನ್) ಮೂರನೇ ಆಹಾರ ಧಾನ್ಯ ಉತ್ಪಾದನಾ ಅಂದಾಜು ಮೂರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.