ADVERTISEMENT

ವಂಚನೆ ಪಟ್ಟಿಗೆ ರಿಲಯನ್ಸ್‌ ಕಮ್ಯುನಿಕೇಷನ್ಸ್‌: ಬ್ಯಾಂಕ್‌ ಆಫ್‌ ಇಂಡಿಯಾ

ಪಿಟಿಐ
Published 24 ಆಗಸ್ಟ್ 2025, 14:21 IST
Last Updated 24 ಆಗಸ್ಟ್ 2025, 14:21 IST
ಅನಿಲ್ ಅಂಬಾನಿ
ಅನಿಲ್ ಅಂಬಾನಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾ (ಬಿಒಐ) ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್ ಕಾಂ) ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದೆ. ಕಂಪನಿಯ ನಿರ್ದೇಶಕರಾಗಿದ್ದ ಅನಿಲ್‌ ಅಂಬಾನಿ ಅವರನ್ನು ಸಹ ಅದರಲ್ಲಿ ಹೆಸರಿಸಿದೆ.

2016ರ ಆಗಸ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾದಿಂದ ₹700 ಕೋಟಿ ಸಾಲವನ್ನು ರಿಲಯನ್ಸ್ ಕಮ್ಯುನಿಕೇಷನ್ಸ್‌ ಪಡೆದುಕೊಂಡಿತ್ತು. ಈ ಹಣವನ್ನು ಕಂಪನಿಯ ಬಂಡವಾಳ, ಕಾರ್ಯಾಚರಣೆ ವೆಚ್ಚ ಮತ್ತು ಸಾಲದ ಮರುಪಾವತಿಗೆ ಬಳಸುವುದಾಗಿ ಹೇಳಿತ್ತು. ಆದರೆ, ಪಡೆದ ಹಣದಲ್ಲಿ ಅರ್ಧದಷ್ಟನ್ನು ಅದೇ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತ ಠೇವಣಿಯಾಗಿ ಹೂಡಿಕೆ ಮಾಡಿತ್ತು. ಇದಕ್ಕೆ ಬ್ಯಾಂಕ್‌ನ ಒಪ್ಪಿಗೆ ಇರಲಿಲ್ಲ. ಈ ಸಂಗತಿಯು ‘ಆರ್‌ ಕಾಂ’ ಷೇರುಪೇಟೆ ನೀಡಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.

‘ಆರ್‌ ಕಾಂ’ಗೆ ನೀಡಿರುವ ಸಾಲ 2017ರ ಜೂನ್‌ 30ರಂದು ಎನ್‌ಪಿಎ ಆಗಿದೆ. ಒಟ್ಟು ಸಾಲ ₹724 ಕೋಟಿ ಆಗಿದೆ. ಸಾಲ ತೆಗೆದುಕೊಂಡಿರುವವರು ಮತ್ತು ಖಾತರಿ ನೀಡಿದವರನ್ನು ಸಂರ್ಪಕಿಸಿ ಸಾಲದ ಮರುಪಾವತಿಗೆ ತಿಳಿಸಲಾಗಿತ್ತು. ಆದರೂ, ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

ADVERTISEMENT

ಜೂನ್‌ನಲ್ಲಿ ಎಸ್‌ಬಿಐ, ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿಯು ಪಡೆದಿರುವ ಸಾಲವನ್ನು ‘ವಂಚನೆ’ ಎಂದು ವರ್ಗೀಕರಿಸಲು ತೀರ್ಮಾನಿಸಿತ್ತು. ಅಲ್ಲದೆ, ಕಂಪನಿಯ ನಿರ್ದೇಶಕರಾಗಿದ್ದ ಅನಿಲ್ ಅಂಬಾನಿ ಅವರ ಹೆಸರನ್ನು ಆರ್‌ಬಿಐಗೆ ಕಳುಹಿಸಲು ಕೂಡ ಬ್ಯಾಂಕ್‌ ನಿರ್ಧರಿಸಿದೆ ಎಂದು ತಿಳಿಸಿತ್ತು. ಇದೀಗ ಸರ್ಕಾರಿ ವಲಯದ ಮತ್ತೊಂದು ಬ್ಯಾಂಕ್ ಕಂಪನಿ ಹಾಗೂ ಅದರ ಪ್ರವರ್ತಕರನ್ನು ವಂಚನೆ ಪಟ್ಟಿಗೆ ಸೇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.