ADVERTISEMENT

ರೆಪೊ ದರದಲ್ಲಿ ಯಥಾಸ್ಥಿತಿ

ಪಿಟಿಐ
Published 6 ಆಗಸ್ಟ್ 2020, 15:56 IST
Last Updated 6 ಆಗಸ್ಟ್ 2020, 15:56 IST
ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್    

ಮುಂಬೈ : ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ ಸದಸ್ಯರು ಅವಿರೋಧವಾಗಿ ತೀರ್ಮಾನಿಸಿದ್ದಾರೆ. ರೆಪೊ ದರ ಕಡಿಮೆ ಮಾಡುವುದಕ್ಕೆ ವಿರಾಮ ನೀಡಿರುವ ಕ್ರಮವನ್ನು, ಹಣದುಬ್ಬರ ನಿಯಂತ್ರಣ ಹಾಗೂ ಆರ್ಥಿಕ ಬೆಳವಣಿಗೆಯ ನಡುವೆ ಸಮತೋಲನ ಸಾಧಿಸುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ಹಣದುಬ್ಬರ ದರವು ಹೆಚ್ಚಿನ ಪ್ರಮಾಣದಲ್ಲಿಯೇ ಇರಲಿದ್ದು, ಇದು 2020–21ನೇ ಸಾಲಿನ ದ್ವಿತೀಯಾರ್ಧದಲ್ಲಿ ಕಡಿಮೆ ಆಗಬಹುದು ಎಂದು ಸಮಿತಿಯು ಅಂದಾಜಿಸಿದೆ. ‘ಹಣದುಬ್ಬರದ ವಿಚಾರದಲ್ಲಿ ಅನಿಶ್ಚಿತತೆ ಇದೆ, ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಅರ್ಥವ್ಯವಸ್ಥೆಯು ತೀರಾ ದುರ್ಬಲ ಸ್ಥಿತಿಯಲ್ಲಿದೆ. ಹಾಗಾಗಿ, ಬಡ್ಡಿದರಗಳಲ್ಲಿ ಬದಲಾವಣೆ ಮಾಡದಿರಲು ಸಮಿತಿ ತೀರ್ಮಾನಿಸಿತು’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

ಆರ್ಥಿಕ ಪುನಶ್ಚೇತನಕ್ಕಾಗಿ ಅಗತ್ಯ ಇರುವಷ್ಟು ಅವಧಿಯವರೆಗೆ ಬಡ್ಡಿದರದ ವಿಚಾರದಲ್ಲಿ ಹೊಂದಾಣಿಕೆಯ ನೀತಿ ಅನುಸರಿಸಲು ಸಮಿತಿಯು ಸಮ್ಮತಿಸಿದೆ.

ADVERTISEMENT

ಸಾಲ ನೀಡುವ ಸಂದರ್ಭದಲ್ಲಿ ನವೋದ್ಯಮಗಳನ್ನೂ ಆದ್ಯತಾ ವಲಯಗಳು ಎಂದು ಪರಿಗಣಿಸಲು ಆರ್‌ಬಿಐ ತೀರ್ಮಾನಿಸಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಹಾಗೂ ರಾಷ್ಟ್ರೀಯ ವಸತಿ ಬ್ಯಾಂಕ್‌ಗೆ (ಎನ್‌ಎಚ್‌ಬಿ) ತಲಾ ₹ 5 ಸಾವಿರ ಹೆಚ್ಚುವರಿ ನಗದು ವಿತರಿಸಲು ಕೂಡ ಆರ್‌ಬಿಐ ತೀರ್ಮಾನಿಸಿದೆ.

‘ಹಾಲಿ ಆರ್ಥಿಕ ವರ್ಷದಲ್ಲಿ ಜಿಡಿಪಿಯ ನಿಜವಾದ ಬೆಳವಣಿಗೆಯು ನಕಾರಾತ್ಮಕವಾಗಿಯೇ ಇರಲಿದೆ ಎಂಬ ನಿರೀಕ್ಷೆ ಇದೆ’ ಎಂದೂ ದಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.