ನವದೆಹಲಿ: ಆಹಾರ ವಸ್ತುಗಳ ಬೆಲೆ ಏರಿಕೆಯು ಮಂದವಾಗಿ ಇದ್ದುದರ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಶೇಕಡ 2.82ಕ್ಕೆ ತಗ್ಗಿದೆ. ಇದು ಆರು ವರ್ಷಗಳ ಕನಿಷ್ಠ ಮಟ್ಟ.
ಇದರೊಂದಿಗೆ, ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತ ನಾಲ್ಕು ತಿಂಗಳುಗಳಿಂದ ಆರ್‌ಬಿಐ ಮಿತಿಯಲ್ಲಿ (ಶೇ 4) ಉಳಿದಂತಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ದರವು ಏಪ್ರಿಲ್‌ನಲ್ಲಿ ಶೇ 3.16ರಷ್ಟು ಇತ್ತು. ಇದು ಹಿಂದಿನ ವರ್ಷದ ಮೇ ತಿಂಗಳಲ್ಲಿ ಶೇ 4.8ರಷ್ಟು ಇತ್ತು. ಈ ಬಾರಿಯ ಮೇ ತಿಂಗಳಲ್ಲಿ ದಾಖಲಾಗಿರುವುದು 2019ರ ಫೆಬ್ರುವರಿ ನಂತರದ ಕನಿಷ್ಠ ಮಟ್ಟ. ಹಣದುಬ್ಬರದ ಇಳಿಕೆಯನ್ನು ಗಮನಿಸಿ ಆರ್‌ಬಿಐ ರೆಪೊ ದರವನ್ನು ಶೇಕಡ 0.50ರಷ್ಟು ಕಡಿಮೆ ಮಾಡಿದೆ.
ಮೇ ತಿಂಗಳಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ 0.99ರಷ್ಟು ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳಲ್ಲಿ ಹೇಳಲಾಗಿದೆ.
‘ದ್ವಿದಳ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಏಕದಳ ಧಾನ್ಯಗಳು, ಮನೆಬಳಕೆಯ ಉತ್ಪನ್ನಗಳು ಹಾಗೂ ಸೇವೆಗಳು, ಮೊಟ್ಟೆಯ ಬೆಲೆ ಏರಿಕೆಯಲ್ಲಿ ಇಳಿಕೆ ಆಗಿರುವುದು ಮೇ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಕಡಿಮೆ ಆಗಿರುವುದಕ್ಕೆ ಮುಖ್ಯ ಕಾರಣ’ ಎಂದು ಎನ್‌ಎಸ್‌ಒ ಪ್ರಕಟಣೆ ತಿಳಿಸಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು 75 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿರುವುದು ರೆಪೊ ದರ ಇಳಿಸಲು ಆರ್‌ಬಿಐ ಕೈಗೊಂಡ ತೀರ್ಮಾನವನ್ನು ಸಮರ್ಥಿಸುವಂತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.