ADVERTISEMENT

ಶೇ 5.52ರ ಮಟ್ಟದಲ್ಲಿ ಹಣದುಬ್ಬರ

ಪಿಟಿಐ
Published 12 ಏಪ್ರಿಲ್ 2021, 18:25 IST
Last Updated 12 ಏಪ್ರಿಲ್ 2021, 18:25 IST

ನವದೆಹಲಿ: ಚಿಲ್ಲರೆ ಹಣದುಬ್ಬರ ದರವು ಮಾರ್ಚ್‌ ತಿಂಗಳಲ್ಲಿ ಶೇಕಡ 5.52ಕ್ಕೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಫೆಬ್ರುವರಿಯಲ್ಲಿ ಶೇ 5.03 ಆಗಿತ್ತು.

ಮಾರ್ಚ್‌ ತಿಂಗಳಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ 4.94ಕ್ಕೆ ತಲುಪಿದೆ. ಇದು ಫೆಬ್ರುವರಿಯಲ್ಲಿ ಶೇ 3.87ರಷ್ಟು ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

2020–21ರ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣವು ಶೇ 5ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿತ್ತು. ಹೊಸ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಹಣದುಬ್ಬರ ಶೇ 5.2ರಷ್ಟು ಇರಲಿದೆ ಎಂದೂ ಅದು ಅಂದಾಜು ಮಾಡಿದೆ.

ADVERTISEMENT

2020ರ ಜೂನ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಜಾಸ್ತಿ ಆಗಿತ್ತು. ಡಿಸೆಂಬರ್‌ನಲ್ಲಿ ತುಸು ಕಡಿಮೆ ಆಯಿತು, ಜನವರಿಯಲ್ಲಿ ಶೇ 4.1ಕ್ಕೆ ಇಳಿಕೆ ಆಯಿತು. ಆದರೆ ಫೆಬ್ರುವರಿಯಲ್ಲಿ ಮತ್ತೆ ಶೇ 5ರ ಮಟ್ಟಕ್ಕಿಂತ ಹೆಚ್ಚಾಯಿತು.

ಕೈಗಾರಿಕಾ ಉತ್ಪಾದನೆ ಇಳಿಕೆ

ದೇಶದ ಕೈಗಾರಿಕಾ ಉತ್ಪಾದನೆಯು ಸತತ ಎರಡನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ತಯಾರಿಕೆ ಮತ್ತು ಗಣಿ ವಲಯಗಳು ಕಂಡ ಇಳಿಕೆಯಿಂದಾಗಿ ಕೈಗಾರಿಕಾ ಉತ್ಪಾದನೆಯು ಫೆಬ್ರುವರಿಯಲ್ಲಿ ಶೇಕಡ 3.6ರಷ್ಟು ಇಳಿಕೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ಬಿಡುಗಡೆ ಮಾಡಿದೆ.

2020ರ ಫೆಬ್ರುವರಿಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 5.2ರಷ್ಟು ಬೆಳವಣಿಗೆ ಕಂಡಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 77.63ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯದ ಬೆಳವಣಿಗೆಯು ಫೆಬ್ರುವರಿಯಲ್ಲಿ ಶೇ 3.7ರಷ್ಟು ಇಳಿಕೆ ಆಗಿದೆ. ಗಣಿ ವಲಯದ ಚಟುವಟಿಕೆಯು ಶೇ 5.5ರಷ್ಟು ಇಳಿಕೆ ಕಂಡಿದೆ.

ಕೈಗಾರಿಕಾ ಉತ್ಪಾದನೆಯು ಕೋವಿಡ್‌ ಕಾರಣದಿಂದಾಗಿ 2020ರ ಮಾರ್ಚ್‌ನಲ್ಲಿ ಶೇ 18.7ರಷ್ಟು ಕುಸಿತ ಕಂಡಿತ್ತು. 2020ರ ಆಗಸ್ಟ್‌ವರೆಗೂ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು.

2019–20ರ ಏಪ್ರಿಲ್‌–ಫೆಬ್ರುವರಿ ಅವಧಿಗೆ ಹೋಲಿಸಿದರೆ 2020–21ರ ಏಪ್ರಿಲ್‌–ಫೆಬ್ರುವರಿಯ ಅವಧಿಯಲ್ಲಿ ಐಐಪಿ ಶೇ 11.3ರಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.