ADVERTISEMENT

17 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ

ಪಿಟಿಐ
Published 12 ಏಪ್ರಿಲ್ 2022, 17:28 IST
Last Updated 12 ಏಪ್ರಿಲ್ 2022, 17:28 IST
   

ನವದೆಹಲಿ: ಆಹಾರ ವಸ್ತುಗಳ ಬೆಲೆ ದುಬಾರಿ ಆದ ಪರಿಣಾಮವಾಗಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಮಾರ್ಚ್‌ ತಿಂಗಳಲ್ಲಿ ಶೇಕಡ 6.95ಕ್ಕೆ ತಲುಪಿದೆ. ಇದು 17 ತಿಂಗಳ ಗರಿಷ್ಠ ಪ್ರಮಾಣ. ಅಲ್ಲದೆ, ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿರುವ ಮಿತಿಗಿಂತ ಹೆಚ್ಚು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರವು ಸತತ ಮೂರು ತಿಂಗಳುಗಳಿಂದ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. 2020ರ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 7.61ರಷ್ಟು ಇತ್ತು. ಅದಾದ ನಂತರದ ಗರಿಷ್ಠ ಪ್ರಮಾಣದ ಹಣದುಬ್ಬರ ದರವು ಮಾರ್ಚ್‌ನಲ್ಲಿ ದಾಖಲಾಗಿದೆ.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ 7.68ಕ್ಕೆ ಜಿಗಿದಿದೆ. ಇದು ಫೆಬ್ರುವರಿಯಲ್ಲಿ ಶೇ 5.85ರಷ್ಟು ಇತ್ತು. ಹಿಂದಿನ ವರ್ಷದ ಮಾರ್ಚ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 5.52ರಷ್ಟಾಗಿತ್ತು. ಆಗ ಆಹಾರ ವಸ್ತುಗಳ ಹಣದುಬ್ಬರವು ಶೇ 4.87ರಷ್ಟು ಇತ್ತು.

ADVERTISEMENT

ಚಿಲ್ಲರೆ ಹಣದುಬ್ಬರ ದರ ಶೇ 6ರ ಗಡಿ ದಾಟದಂತೆ ನೋಡಿಕೊಳ್ಳುವ ಗುರಿಯನ್ನು ಆರ್‌ಬಿಐ ನಿಗದಿ ಮಾಡಿಕೊಂಡಿದೆ. ಜನವರಿ–ಮಾರ್ಚ್‌ ತ್ರೈಮಾಸಿಕವನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಚಿಲ್ಲರೆ ಹಣದುಬ್ಬರ ದರವು ಶೇ 6.34ರಷ್ಟು ಆಗುತ್ತದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಎಣ್ಣೆ ಮತ್ತು ಕೊಬ್ಬು ವಿಭಾಗದಲ್ಲಿ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ 18.79ಕ್ಕೆ ಏರಿಕೆ ಆಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಿಂದಾಗಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದ್ದು ಇದಕ್ಕೆ ಮುಖ್ಯ ಕಾರಣ.

ತರಕಾರಿಗಳ ಹಣದುಬ್ಬರ ಪ್ರಮಾಣವು ಶೇ 11.64ಕ್ಕೆ ಏರಿದೆ. ಮಾಂಸ ಮತ್ತು ಮೀನಿನ ಹಣದುಬ್ಬರವು ಶೇ 9.63ಕ್ಕೆ ಏರಿಕೆ ಆಗಿದೆ.

‘ಚಿಲ್ಲರೆ ಹಣದುಬ್ಬರ ದರವು ನಮ್ಮ ನಿರೀಕ್ಷೆಗೂ ಮೀರಿ ಏರಿಕೆ ಆಗಿದೆ. ಮಾಂಸ ಮತ್ತು ಮೀನಿನಂತಹ ಆಹಾರ ವಸ್ತುಗಳ ಬೆಲೆಯಲ್ಲಿ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಏರಿಕೆ ಆಗಿರುವುದು ಹಣದುಬ್ಬರದ ಒಟ್ಟಾರೆ ಹೆಚ್ಚಳಕ್ಕೆ ಒಂದು ಮುಖ್ಯ ಕಾರಣ’ ಎಂದು ರೇಟಿಂಗ್ಸ್‌ ಸಂಸ್ಥೆ ‘ಐಸಿಆರ್‌ಎ’ನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ಆರ್‌ಬಿಐನ ಹಣಕಾಸು ನೀತಿ ಸಮಿತಿಯು ತನ್ನ ಹೊಂದಾಣಿಕೆಯ ಹಣಕಾಸು ನೀತಿಯಲ್ಲಿ ಬದಲಾವಣೆ ತರುವ ಸೂಚನೆಯನ್ನು ನೀಡಿದೆ. ಹೀಗಾಗಿ, ಏಪ್ರಿಲ್‌ನಲ್ಲಿಯೂ ಹಣದುಬ್ಬರ ಪ್ರಮಾಣ ಕಡಿಮೆ ಆಗದೆ ಇದ್ದರೆ ರೆಪೊ ದರ ಹೆಚ್ಚಿಸುವಿಕೆಯನ್ನು ಆರ್‌ಬಿಐ ಈ ವರ್ಷದ ಜೂನ್‌ನಲ್ಲಿ ಆರಂಭಿಸಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ ತಿಂಗಳ ಬಹುತೇಕ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ, ಬೆಲೆ ಹೆಚ್ಚಳದ ಸಂಪೂರ್ಣ ಪರಿಣಾಮವು ಏಪ್ರಿಲ್‌ ತಿಂಗಳ ಹಣದುಬ್ಬರ ದರದಲ್ಲಿ ಗೊತ್ತಾಗಲಿದೆ’ ಎಂದು ನೈಟ್ ಫ್ರ್ಯಾಂಕ್ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ವಿವೇಕ್ ರಾಠಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.