
ನವದೆಹಲಿ: ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆಯು ದಾಖಲೆಯ 12.45 ಕೋಟಿ ಟನ್ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಉತ್ಪಾದನೆಗೆ ಹೋಲಿಸಿದರೆ ಶೇಕಡ 1.4ರಷ್ಟು ಹೆಚ್ಚು.
ಆದರೆ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಹತ್ತಿಯ ಉತ್ಪಾದನೆಯು ಕಡಿಮೆ ಆಗಿದೆ. 2025–26ನೇ ವರ್ಷದ ಮುಂಗಾರು ಹಂಗಾಮಿನಲ್ಲಿ ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 17.33 ಕೋಟಿ ಟನ್ ಆಗಿದೆ ಎಂದು ಸಚಿವಾಲಯ ಸಿದ್ಧಪಡಿಸಿರುವ ಮೊದಲ ಮುಂಗಡ ಅಂದಾಜಿನಲ್ಲಿ ಹೇಳಲಾಗಿದೆ.
ಹಿಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ 16.95 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆ ಆಗಿತ್ತು. ಹಿಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ಅಕ್ಕಿಯ ಉತ್ಪಾದನೆಯು 12.28 ಕೋಟಿ ಟನ್‌ಗಳಷ್ಟು ಇತ್ತು.
ಮುಂಗಾರು ಹಂಗಾಮಿನ ಬೆಳೆಗಳನ್ನು ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ. ಅಕ್ಕಿಯು ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದೆ.
‘ದೇಶದ ಕೆಲವು ಭಾಗಗಳಲ್ಲಿ ಸುರಿದ ಅತಿವೃಷ್ಟಿಯು ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಆದರೆ ಹೆಚ್ಚಿನ ಪ್ರದೇಶಗಳು ಉತ್ತಮ ಮುಂಗಾರು ಮಳೆಯಿಂದಾಗಿ ಪ್ರಯೋಜನ ಪಡೆದಿವೆ. ಇದರಿಂದಾಗಿ ಒಟ್ಟಾರೆಯಾಗಿ ಬೆಳೆ ಹೆಚ್ಚಾಗಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.