ADVERTISEMENT

ರೊಬಸ್ಟಾ ಕಾಫಿ ದರ ಕುಸಿತ: ದಾಸ್ತಾನಿಟ್ಟುಕೊಂಡಿರುವ ರೈತರಿಗೆ ಆತಂಕ

ರವಿ ಕೆಳಂಗಡಿ
Published 29 ಮೇ 2025, 23:30 IST
Last Updated 29 ಮೇ 2025, 23:30 IST
ರೊಬಸ್ಟಾ ಕಾಫಿ ಬೇಳೆ
ರೊಬಸ್ಟಾ ಕಾಫಿ ಬೇಳೆ   

ಕಳಸ: ಮೂರು ತಿಂಗಳ ಹಿಂದೆ ಕೆ.ಜಿ.ಗೆ ₹500 ತಲುಪಿದ್ದ ರೊಬಸ್ಟಾ ಕಾಫಿ ಬೀಜದ ದರವು ಈಗ ಕೆ.ಜಿ.ಗೆ ₹410ಕ್ಕೆ ಕುಸಿದಿದೆ.

ಎರಡು ವಾರಗಳಿಂದ ರೊಬಸ್ಟಾ ಕಾಫಿ ಬೆಲೆಯು ನಿರಂತರವಾಗಿ ಕುಸಿಯುತ್ತಿದೆ. ಲಂಡನ್ ಮಾರುಕಟ್ಟೆಯಲ್ಲಿ ಗುರುವಾರ ಟನ್‌ವೊಂದಕ್ಕೆ 4,540 ಡಾಲರ್ ದೊರೆತಿತ್ತು. ಮೂರು ತಿಂಗಳ ಹಿಂದೆ ದರವು 5,800 ಡಾಲರ್‌ವರೆಗೆ ತಲುಪಿತ್ತು.

ರೊಬಸ್ಟಾ ಕಾಫಿಯ ಗುಣಮಟ್ಟ ಆಧಾರದ ಮೇಲೆ ಬೆಳೆಗಾರರು ಮೂರು ತಿಂಗಳ ಹಿಂದೆ 50 ಕೆ.ಜಿ ಚೀಲವೊಂದಕ್ಕೆ ₹14 ಸಾವಿರದವರೆಗೂ ಧಾರಣೆ ಪಡೆದಿದ್ದರು. ಈಗ ಅದೇ ಕಾಫಿಗೆ ಚೀಲವೊಂದಕ್ಕೆ ₹10 ಸಾವಿರದಿಂದ ₹11 ಸಾವಿರ ಸಿಗುತ್ತಿದೆ. ಖರೀದಿಸುವ ಮುನ್ನ ವ್ಯಾಪಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ADVERTISEMENT

ಸಣ್ಣ ಬೆಳೆಗಾರರು ಕಾಫಿಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ದಾಸ್ತಾನು ಇಟ್ಟಿರುವ ಬೆಳೆಗಾರರಿಗೆ ದರ ಕುಸಿತ ಭ್ರಮನಿರಸನ ತಂದಿದೆ. ಏರಿದ್ದ ದರವನ್ನು ನಂಬಿಕೊಂಡು ತೋಟಕ್ಕೆ ವಿಪರೀತ ಖರ್ಚು ಮಾಡುವ ಬೆಳೆಗಾರರಿಗೂ ಈಗಿನ ದರ ಇಳಿಕೆಯು ಆಘಾತ ತಂದಿದೆ. ಮುಂದಿನ ಎರಡು ವರ್ಷ ಬೆಲೆ ಇಳಿಯಲಾರದು ಎಂಬ ಪರಿಣತರ ಹೇಳಿಕೆ ಸುಳ್ಳಾಗಿದೆ ಎನ್ನುತ್ತಾರೆ ಅವರು. ‌

ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ದರ 7 ವಾರದ ಕನಿಷ್ಠ ಮಟ್ಟಕ್ಕೆ ಇಳಿದಿದ್ದರೆ, ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ 6 ತಿಂಗಳಲ್ಲಿ ಈಗ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿಯೆಟ್ನಾಂ ದೇಶದಲ್ಲಿ ಮುಂದಿನ ಹಂಗಾಮಿಗೆ ಶೇ 7ರಷ್ಟು ರೊಬಸ್ಟಾ ಕಾಫಿ ಮತ್ತು ಬ್ರೆಜಿಲ್ ದೇಶದಲ್ಲಿ ಅರೇಬಿಕಾ ಕಾಫಿ ಅಲ್ಪಪ್ರಮಾಣದಲ್ಲಿ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ದರ ಇಳಿಕೆ ಶುರು ಆಗಿದೆ ಎಂಬುದು ವ್ಯಾಪಾರಿಗಳ ಹೇಳಿಕೆ.

‘ಈ ವರ್ಷ ಕಾಫಿ ದರ ಎಲ್ಲ ನಿರೀಕ್ಷೆ ಮೀರಿ ಏರಿತ್ತು. ಈಗಿನ ಅಲ್ಪ ಇಳಿಕೆ ಮಾರುಕಟ್ಟೆಯಲ್ಲಿನ ಸಹಜ ನಡವಳಿಕೆ. ಈಗಿನ ಧಾರಣೆ ಸ್ಥಿರವಾಗಿ, ಮುಂದಿನ ಎರಡು ವರ್ಷ ಉಳಿದರೆ ಬೆಳೆಗಾರರಿಗೆ ಅನುಕೂಲ ಆಗಲಿದೆ’ ಎಂದು ಕಾಫಿ ಮಾರುಕಟ್ಟೆ ತಜ್ಞ ಮನೋಹರ್ ಹೇಳುತ್ತಾರೆ.

ವಿಯೆಟ್ನಾಂ, ಇಂಡೊನೇಷ್ಯಾ ಮತ್ತು ಬ್ರೆಜಿಲ್ ದೇಶಗಳಿಂದ ರೊಬಸ್ಟಾ ಕಾಫಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಬ್ರೆಜಿಲ್‌ನಲ್ಲಿಯೂ ಧಾರಣೆ ಕುಸಿದಿದ್ದು, ಇದು ಕೂಡ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಕಾಫಿ ಧಾರಣೆಯು ಬಹುವರ್ಷಗಳ ಮಾರುಕಟ್ಟೆ ಆಧರಿಸಿದ್ದು, ಬೇಗ ಕುಸಿಯಲಾರದು. ಬೇಡಿಕೆ, ಪೂರೈಕೆ ಆಧಾರದ ಮೇಲೆ ಸ್ವಲ್ಪಕಾಲದ ನಂತರ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆಶಾವಾದವೂ ಬೆಳೆಗಾರರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.