ADVERTISEMENT

ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ನ ₹ 700 ಕೋಟಿ ಮೌಲ್ಯದ ಷೇರು ವಹಿವಾಟಿಗೆ ‘ಇ.ಡಿ’ ತಡೆ

ಹಣ ಅಕ್ರಮ ವರ್ಗಾವಣೆ ಪ್ರಕರಣ

ಪಿಟಿಐ
Published 25 ಸೆಪ್ಟೆಂಬರ್ 2021, 11:59 IST
Last Updated 25 ಸೆಪ್ಟೆಂಬರ್ 2021, 11:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಲಿಮಿಟೆಡ್‌ನ (ಕೆಎಸ್‌ಬಿಎಲ್‌) ಸಿಎಂಡಿ ಸಿ. ಪಾರ್ಥಸಾರಥಿ ಮತ್ತು ಇತರರ ವಿರುದ್ಧದಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ಸ್ಥಗಿತಗೊಳಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.

ತೆಲಂಗಾಣ ಪೊಲೀಸರು ಪಾರ್ಥಸಾರತಿ ಅವರನ್ನು ಕಳೆದ ತಿಂಗಳು ಬಂಧಿಸಿದ ಬಳಿಕ ಹೈದರಾಬಾದ್‌ನ ಚಂಚಲಗುಡ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ.

ಹೈದರಾಬಾದ್‌ನ ಆರು ಕಡೆಗಳಲ್ಲಿ ಹಾಗೂ ಕಾರ್ವೆ ಸಮೂಹ ಕಂಪನಿಗಳಿಗೆ ಸೇರಿದ ವಿವಿಧ ಸ್ಥಳಗಳು ಹಾಗೂ ಪಾರ್ಥಸಾರಥಿ ಅವರ ನಿವಾಸದಲ್ಲಿ ‘ಇ.ಡಿ’ ಸೆಪ್ಟೆಂಬರ್‌ 22ರಂದು ಶೋಧ ಕಾರ್ಯ ನಡೆಸಿತ್ತು.

ADVERTISEMENT

ಆಸ್ತಿ ದಾಖಲೆಗಳು, ವೈಯಕ್ತಿಕ ದಿನಚರಿಗಳು, ಎಲೆಕ್ಟ್ರಾನಿಕ್ ಸಾಧನಗಳು ಇತ್ಯಾದಿಗಳನ್ನು ಅಪರಾಧದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಅಪರಾಧವನ್ನು ಮರೆಮಾಚುವ ಉದ್ದೇಶದಿಂದ ಪಾರ್ಥಸಾರಥಿ ಅವರು ಕಾರ್ವೆ ಸಮೂಹ ಕಂಪನಿಗಳಲ್ಲಿ ಹೊಂದಿರುವ ಷೇರುಗಳನ್ನು ಖಾಸಗಿ ಕಂಪನಿಗಳ ಮೂಲಕ ಮಾರಾಟ ಮಾಡುವ ಪ್ರಯತ್ನ ನಡೆಸಿರುವುದಾಗಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ 2019–20ನೇ ಸಾಲಿನ ಮೌಲ್ಯಮಾಪನದ ಪ್ರಕಾರ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ತಡೆಹಿಡಿಯುವಂತೆ ಆದೇಶ ನೀಡಿರುವುದಾಗಿ ‘ಇ.ಡಿ’ ಹೇಳಿದೆ.

ಪಾರ್ಥಸಾರಥಿ ಮತ್ತು ಅವರ ಮಕ್ಕಳಾದ ರಜತ್‌ ಪಾರ್ಥಸಾರಥಿ ಮತ್ತು ಅಧಿರಾಜ್‌ ಪಾರ್ಥಸಾರಥಿ ಹಾಗೂ ಅವರ ಕಂಪನಿಗಳು ನೇರ ಮತ್ತು ಪರೋಕ್ಷವಾಗಿಕಾರ್ವೆ ಸಮೂಹದ ಈ ಷೇರುಗಳನ್ನು ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.