ADVERTISEMENT

ರಷ್ಯಾ ತೈಲ ಖರೀದಿ ಹೆಚ್ಚಳ

ರಾಯಿಟರ್ಸ್
Published 17 ಮೇ 2022, 16:25 IST
Last Updated 17 ಮೇ 2022, 16:25 IST
   

ನವದೆಹಲಿ (ರಾಯಿಟರ್ಸ್): ಏಪ್ರಿಲ್‌ ತಿಂಗಳಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾ ನಾಲ್ಕನೆಯ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ತಿಂಗಳುಗಳಲ್ಲಿ ಭಾರತವು ರಷ್ಯಾದಿಂದ ತರಿಸಿಕೊಳ್ಳಲಿರುವ ಕಚ್ಚಾ ತೈಲದ ಪ್ರಮಾಣವು ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ.

ಏಪ್ರಿಲ್‌ನಲ್ಲಿ ಭಾರತವು ರಷ್ಯಾದಿಂದ ಪ್ರತಿದಿನ 2.77 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಸಿದೆ. ಮಾರ್ಚ್‌ನಲ್ಲಿ ಇದು ದಿನವೊಂದಕ್ಕೆ 66 ಸಾವಿರ ಬ್ಯಾರೆಲ್ ಆಗಿತ್ತು. ಆಗ ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾ ಹತ್ತನೆಯ ಸ್ಥಾನದಲ್ಲಿತ್ತು.

ಉಕ್ರೇನ್–ರಷ್ಯಾ ಯುದ್ಧ ಶುರುವಾದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿವೆ. ಇದಾದ ನಂತರದಲ್ಲಿ ಭಾರತದ ಕಂಪನಿಗಳು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸಲು ಆರಂಭಿಸಿವೆ.

ADVERTISEMENT

ಭಾರತದ ಒಟ್ಟು ತೈಲ ಆಮದಿನಲ್ಲಿ ಆಫ್ರಿಕಾದ ಪಾಲು ಏಪ್ರಿಲ್‌ನಲ್ಲಿ ಶೇ 6ಕ್ಕೆ ಇಳಿಕೆಯಾಗಿದೆ. ಇದು ಮಾರ್ಚ್‌ ತಿಂಗಳಲ್ಲಿ ಶೇ 14.5ರಷ್ಟು ಇತ್ತು. ಅಮೆರಿಕದಿಂದ ತರಿಸುವ ಕಚ್ಚಾ ತೈಲದ ಪಾಲು ಅರ್ಧದಷ್ಟು ಕಡಿಮೆ ಆಗಿದ್ದು, ಶೇ 3ಕ್ಕೆ ತಲುಪಿದೆ.

ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಏಪ್ರಿಲ್‌ನಲ್ಲಿ ಶೇ 71ಕ್ಕೆ ಹೆಚ್ಚಳವಾಗಿದೆ. ಮೇ ತಿಂಗಳಿನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು 4.87 ಲಕ್ಷ ಬ್ಯಾರೆಲ್‌ಗೆ ಹೆಚ್ಚಾಗುವ ಸಾಧ್ಯತೆ ಇದೆ.

ಏಪ್ರಿಲ್‌ನಲ್ಲಿ ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡಿದ ದೇಶಗಳ ಸಾಲಿನಲ್ಲಿ ಇರಾಕ್ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಮೊದಲ ಹಾಗೂ ಎರಡನೆಯ ಸ್ಥಾನಗಳಲ್ಲಿ ಇವೆ. ಮೂರನೆಯ ಸ್ಥಾನದಲ್ಲಿ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.