ADVERTISEMENT

ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ

ಆರು ನಗರಗಳ ಪೈಕಿ ಮುಂಚೂಣಿಯಲ್ಲಿ ಬೆಂಗಳೂರು: ಸಾವಿಲ್ಸ್‌ ವರದಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST

ಬೆಂಗಳೂರು: ದೇಶದಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು 2019ರಲ್ಲಿ ಶೇ 22ರಷ್ಟು ದಾಖಲೆ ಮಟ್ಟದಲ್ಲಿ ಪ್ರಗತಿ ದಾಖಲಿಸಿದೆ. ಕಚೇರಿ ಸ್ಥಳಾವಕಾಶ ಬಳಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಜಾಗತಿಕ ಮಟ್ಟದಲ್ಲಿ ರಿಯಲ್‌ ಎಸ್ಟೇಟ್‌ ಸೇವೆಗಳನ್ನು ಒದಗಿಸುವ ಸಾವಿಲ್ಸ್‌ ಕಂಪನಿ ತಿಳಿಸಿದೆ.

ಕಂಪನಿಯು ಕಚೇರಿ ಮಾರುಕಟ್ಟೆಯ ಕುರಿತು ದೇಶದಲ್ಲಿ ತನ್ನ ಮೊದಲ ವರದಿಯನ್ನು ಗುರುವಾರ ಇಲ್ಲಿ ಬಿಡುಗಡೆ ಮಾಡಿದೆ. ಬೆಂಗಳೂರು ಒಳಗೊಂಡು ಮುಂಬೈ, ದೆಹಲಿ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಚೆನ್ನೈ, ಪುಣೆ ಮತ್ತು ಹೈದರಾಬಾದ್‌ನಲ್ಲಿ ಕಚೇರಿ ಸ್ಥಳಾವಕಾಶದ ಬಳಕೆಯ ಕುರಿತು ಮಾಹಿತಿ ನೀಡಿದೆ.

ಕಚೇರಿ ಸ್ಥಳಾವಕಾಶ ಬಳಕೆಗೆ ಸಂಬಂಧಿಸಿದಂತೆ ಆರು ನಗರಗಳ ಪೈಕಿ ಈ ಬಾರಿಯೂ ಬೆಂಗಳೂರು ಶೇ 15ರಷ್ಟು ಪ್ರಗತಿ ಕಂಡಿದ್ದು, ದೇಶದ ಅತಿದೊಡ್ಡ ಮಾರುಕಟ್ಟೆಯ ಸ್ಥಾನವನ್ನು ಕಾಯ್ದುಕೊಂಡಿದೆ. 2020ರಲ್ಲಿ ಕಚೇರಿ ಗುತ್ತಿಗೆ ಚಟುವಟಿಕೆಯು ಬೆಂಗಳೂರಿನಲ್ಲಿ ಶೇ 4 ರಿಂದ ಶೇ 5ರಷ್ಟು ಬೆಳವಣಿಗೆ ಕಾಣುವ ಅಂದಾಜು ಮಾಡಲಾಗಿದೆ.

ADVERTISEMENT

‘ತಂತ್ರಜ್ಞಾನ ವಲಯದಲ್ಲಿನ ಸಾಮರ್ಥ್ಯ ವೃದ್ಧಿ, ಕೋ–ವರ್ಕಿಂಗ್‌, ಇ–ಕಾಮರ್ಸ್‌, ಹಣಕಾಸು ಸೇವೆಗಳಂತಹ ಸಂಗತಿಗಳು ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ’ ಎಂದು ಸಾವಿಲ್ಸ್‌ ಇಂಡಿಯಾದ ಸಿಇಒ ಅನುರಾಗ್‌ ಮಾಥೂರ್‌ ತಿಳಿಸಿದ್ದಾರೆ.

110 ಎಕರೆಗೆ ಫ್ಲಿಪ್‌ಕಾರ್ಟ್‌ ಹುಡುಕಾಟ

ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ತನ್ನ ಕ್ಯಾಂಪಸ್‌ ಸ್ಥಾಪನೆಗಾಗಿ ಬೆಂಗಳೂರಿನಲ್ಲಿ 110 ಎಕರೆ ಜಾಗದ ಹುಡುಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಪ್ರತಿಕ್ರಿಯೆ ನೀಡಲು ಫ್ಲಿಪ್‌ಕಾರ್ಟ್‌ ವಕ್ತಾರರು ನಿರಾಕರಿಸಿದ್ದಾರೆ.

‘ದೇವನಹಳ್ಳಿ ಸಮೀಪ ಜಾಗದ ಹುಡುಕಾಟ ನಡೆಸಲಾಗಿದೆ. ಈ ಸಂಬಂಧ ಕಂಪನಿಗೆ ಸಲಹೆ ನೀಡಲಾಗುತ್ತಿದೆ. ಸೂಕ್ತ ಜಾಗ ಸಿಕ್ಕ ಬಳಿಕವಷ್ಟೇ ಕಂಪನಿಯು ಔಪಚಾರಿಕ ಪ್ರಸ್ತಾವನೆ ಸಲ್ಲಿಸಲಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಕಂಪನಿಯು ಸದ್ಯ ಎಂಬಸಿ ಟೆಕ್‌ ಪಾರ್ಕ್‌ನಲ್ಲಿ 8 ಲಕ್ಷ ಚದರ ಅಡಿ ಕಚೇರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.