ADVERTISEMENT

ಖಾಸಗಿ ನೌಕರರ ಪಿಂಚಣಿ ಹೆಚ್ಚಳ

ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದಿಂದ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:15 IST
Last Updated 2 ಏಪ್ರಿಲ್ 2019, 20:15 IST
ಪಿಂಚಣಿದಾರರು
ಪಿಂಚಣಿದಾರರು   

ನವದೆಹಲಿ: ಸುಪ್ರೀಂಕೋರ್ಟ್‌ ನೀಡಿರುವ ಮಹತ್ವದ ತೀರ್ಪಿನಿಂದಾಗಿ, ಖಾಸಗಿ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಪಿಂಚಣಿ ಮೊತ್ತವು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ.

ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು (ಎಸ್‌ಎಲ್‌ಪಿ) ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತ ಮತ್ತು ಸಂಜೀವ್‌ ಖನ್ನಾ ಅವರನ್ನು ಒಳಗೊಂಡಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ADVERTISEMENT

ನಿವೃತ್ತರಿಗೆ ಅವರು ಪಡೆಯುವ ಪೂರ್ಣ ಪ್ರಮಾಣದ ವೇತನ ಆಧರಿಸಿ ಪಿಂಚಣಿ ನೀಡಬೇಕು ಎಂದು ಹೈಕೋರ್ಟ್‌, ‘ಇಪಿಎಫ್‌ಒ’ಗೆ ಆದೇಶಿಸಿತ್ತು. ಪ್ರತಿ ತಿಂಗಳ ₹ 15 ಸಾವಿರ ಗರಿಷ್ಠ ವೇತನ ಆಧರಿಸಿ ಪಿಂಚಣಿ ಲೆಕ್ಕಹಾಕುವುದು ಸರಿಯಲ್ಲ ಎಂದು ಸೂಚಿಸಿತ್ತು. ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ‘ಇಪಿಎಫ್‌ಒ’ ಮೇಲ್ಮನವಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರವು 1995ರಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್‌) ಜಾರಿಗೊಳಿಸಿತ್ತು. ಈ ಯೋಜನೆಯಡಿ ಪಾವತಿಸುವ ಉದ್ಯೋಗದಾತ ಮತ್ತು ಉದ್ಯೋಗಿಗಳ ತಲಾ ಕೊಡುಗೆಯ ಸಂಬಳದ ಗರಿಷ್ಠ ಮಿತಿಯನ್ನು ಆರಂಭದಲ್ಲಿ ₹ 6,500ಕ್ಕೆ ಮಿತಿಗೊಳಿಸಲಾಗಿತ್ತು.

ಪೂರ್ಣ ಪ್ರಮಾಣದ ವೇತನ ಆಧರಿಸಿ ಪಿಂಚಣಿ ಯೋಜನೆಗೆ ಕೊಡುಗೆ ನೀಡುವ ಉದ್ಯೋಗಿಗಳ ಮನವಿಯನ್ನು ಸ್ವೀಕರಿಸಬೇಕು ಎಂದು ಸುಪ್ರೀಂಕೋರ್ಟ್‌ 2016ರ ಅಕ್ಟೋಬರ್‌ನಲ್ಲಿ ‘ಇಪಿಎಫ್‌ಒ’ಗೆ ನಿರ್ದೇಶನ ನೀಡಿತ್ತು.

ಉದ್ಯೋಗಿಗಳ ಭವಿಷ್ಯ ನಿಧಿ ನಿರ್ವಹಿಸುವ ಖಾಸಗಿ ಸಂಸ್ಥೆಗಳ ಟ್ರಸ್ಟ್‌ಗಳು ಈ ಉದ್ದೇಶಕ್ಕೆ ಬಾಕಿ ಮೊತ್ತ ನೀಡಲು ಸಿದ್ಧವಿದ್ದರೂ ‘ಇಪಿಎಫ್‌ಒ’ ಅದಕ್ಕೆ ಸಮ್ಮತಿಸಿರಲಿಲ್ಲ. ಉದ್ಯೋಗಿಗಳು ಒಂದು ವರ್ಷದ ಒಳಗೆ ತಮ್ಮ ಕೊಡುಗೆ ಹೆಚ್ಚಿಸಲು ಉದ್ಯೋಗದಾತರಿಗೆ ಮನವಿ ಸಲ್ಲಿಸಬೇಕು.

ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಕೂಡ ಉದ್ಯೋಗಿಗಳ ನಿಲುವು ಬೆಂಬಲಿಸಿ ತೀರ್ಪು ನೀಡಿದ್ದವು. ಸುಪ್ರೀಂಕೋರ್ಟ್‌ನ ಈ ತೀರ್ಪು ಈ ಎಲ್ಲ ವಿವಾದಗಳನ್ನು ಅಂತಿಮವಾಗಿ ಇತ್ಯರ್ಥಪಡಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.