ADVERTISEMENT

ಠೇವಣಿ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯ್ತಿ ಅಗತ್ಯ: ಎಸ್‌ಬಿಐ ಅಧ್ಯಯನ ವರದಿ

ಹಿರಿಯ ನಾಗರಿಕರ ಸ್ಥಿರ ಠೇವಣಿ ಕುರಿತು ಉಲ್ಲೇಖ

ಪಿಟಿಐ
Published 25 ಸೆಪ್ಟೆಂಬರ್ 2019, 14:15 IST
Last Updated 25 ಸೆಪ್ಟೆಂಬರ್ 2019, 14:15 IST
   

ನವದೆಹಲಿ: ಹಿರಿಯ ನಾಗರಿಕರ ಉಳಿತಾಯ ಯೋಜನೆಯ (ಎಸ್‌ಸಿಎಸ್‌ಎಸ್‌) ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡುವುದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಠೇವಣಿಗಳ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿರುವ ಸದ್ಯದ ಸಂದರ್ಭದಲ್ಲಿ, ‘ಎಸ್‌ಸಿಎಸ್‌ಎಸ್‌’ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡುವ ಅಗತ್ಯ ಹೆಚ್ಚಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆ ಬೀಳುವುದಿಲ್ಲ. ಈ ಯೋಜನೆಯಡಿ, 60 ವರ್ಷದ ಮೀರಿದ ಹಿರಿಯ ನಾಗರಿಕರು ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಶೇ 8.6ರ ಬಡ್ಡಿ ದರದಲ್ಲಿ 5 ವರ್ಷಗಳವರೆಗೆ ಗರಿಷ್ಠ ₹ 15 ಲಕ್ಷದವರೆಗೆ ಠೇವಣಿ ಇರಿಸಬಹುದು. ಅವಧಿ ಪೂರ್ಣಗೊಂಡ ನಂತರ ಮತ್ತೆ 3 ವರ್ಷಗಳವರೆಗೆ ಯೋಜನೆ ವಿಸ್ತರಿಸಬಹುದು.

ಇಂತಹ ಸ್ಥಿರ ಠೇವಣಿಗೆ ಬರುವ ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿದೆ. ಇದು ಈ ಯೋಜನೆಯ ಬಹುದೊಡ್ಡ ನ್ಯೂನತೆಯಾಗಿದೆ. ಉದಾಹರಣೆಗೆ– 5 ವರ್ಷಗಳವರೆಗೆ ₹ 1 ಲಕ್ಷ ಠೇವಣಿ ಇರಿಸಿದ್ದರೆ ₹ 51 ಸಾವಿರದಷ್ಟು ಬಡ್ಡಿ ಸಿಗಲಿದೆ. ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಈ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡುವುದರಿಂದ ಸರ್ಕಾರಕ್ಕೆ ₹ 3,092 ಕೋಟಿಗಳಷ್ಟು ನಷ್ಟ ಉಂಟಾಗಲಿದೆ. ಇದರಿಂದ ಸರ್ಕಾರದ ವಿತ್ತೀಯ ಕೊರತೆ ಶೇ 0.2ರಷ್ಟು ಮಾತ್ರ ಹೆಚ್ಚಳಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರ ಕಡಿಮೆ ಮಾಡಿರುವುದರಿಂದ ಬ್ಯಾಂಕ್‌ಗಳು ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ತಗ್ಗಿಸಿವೆ. ಇದರಿಂದ ಹಿರಿಯ ನಾಗರಿಕರ ಬಡ್ಡಿ ಆದಾಯಕ್ಕೆ ಕತ್ತರಿ ಬಿದ್ದಿದೆ.

ಅಕ್ಟೋಬರ್‌ 1 ರಿಂದ ರೆಪೊ ದರ ಆಧರಿಸಿ ಬಡ್ಡಿ ದರ ನಿಗದಿಪಡಿಸುವುದನ್ನು ಆರ್‌ಬಿಐ ಕಡ್ಡಾಯ ಮಾಡಿದೆ. ರೆಪೊ ದರವು ಶೇ 0.25ರಷ್ಟು ಏರಿಳಿತ ಕಂಡರೆ ಸಾಲದ ಮೇಲಿನ ಬಡ್ಡಿ ದರವೂ ಏರಿಳಿತ ಕಾಣಲಿದೆ. ಇದು ಸ್ವಾಗತಾರ್ಹವಾದರೂ, ಕೆಲ ಸಂಗತಿಗಳ ಬಗ್ಗೆ ವಿಶೇಷ ಗಮನ ಹರಿಸುವುದೂ ಮುಖ್ಯವಾಗುತ್ತದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಅಧ್ಯಯನದ ಪ್ರಕಾರ, ಠೇವಣಿಗಳ ಮೇಲಿನ ಬಡ್ಡಿ ದರ ಶೇ 1ರಷ್ಟು ಕಡಿಮೆಯಾದರೆ, ಸಾಲಗಳ ಮೇಲಿನ ಬಡ್ಡಿ ದರವು ಶೇ 0.45 ರಿಂದ ಶೇ 0.50ರಷ್ಟು ಇಳಿಕೆಯಾಗಲಿದೆ.

4.10 ಕೋಟಿ; ಸ್ಥಿರ ಠೇವಣಿ ಇರಿಸಿರುವ ಹಿರಿಯ ನಾಗರಿಕರ ಸಂಖ್ಯೆ

₹ 14 ಲಕ್ಷ ಕೋಟಿ; ಹಿರಿಯ ನಾಗರಿಕರ ಸ್ಥಿರ ಠೇವಣಿಯ ಒಟ್ಟು ಮೊತ್ತ

₹ 3.3 ಲಕ್ಷ; ಸರಾಸರಿ ಠೇವಣಿ ಗಾತ್ರ

ಶೇ 7 ; ದೇಶಿ ‘ಜಿಡಿಪಿ’ಯಲ್ಲಿನ ಸ್ಥಿರ ಠೇವಣಿ ಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.