ADVERTISEMENT

ಎರಡನೇ ದಿನವೂ ಸೆನ್ಸೆಕ್‌, ನಿಫ್ಟಿ ಏರಿಕೆ

ಆರ್ಥಿಕ ಚೇತರಿಕೆಯ ಸಕಾರಾತ್ಮಕ ಅಂಶಗಳ ಪ್ರಭಾವ

ಪಿಟಿಐ
Published 2 ಡಿಸೆಂಬರ್ 2021, 13:27 IST
Last Updated 2 ಡಿಸೆಂಬರ್ 2021, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಆರ್ಥಿಕ ಬೆಳವಣಿಗೆಯ ಗತಿಯನ್ನು ಸೂಚಿಸುವ ಜಿಎಸ್‌ಟಿ ಸಂಗ್ರಹ ಮೊತ್ತ, ಜಿಡಿಪಿ ಬೆಳವಣಿಗೆ ಪ್ರಮಾಣ ಮತ್ತು ತಯಾರಿಕಾ ವಲಯದ ಚಟುವಟಿಕೆ ಪ್ರಮಾಣದ ಹೆಚ್ಚಳವು ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 776 ಅಂಶ ಏರಿಕೆ ಕಂಡು 58,461 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 235 ಅಂಶ ಹೆಚ್ಚಾಗಿ 17,401ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ ಷೇರು ಮೌಲ್ಯ ಶೇ 3.92ರಷ್ಟು ಗರಿಷ್ಠ ಏರಿಕೆ ಕಂಡಿತು.

ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಇಳಿಮುಖವಾಗಿದ್ದರೂ ದೇಶದಲ್ಲಿ ಜಿಡಿಪಿ ಬೆಳವಣಿಗೆ ವೃದ್ಧಿ, ತಯಾರಿಕಾ ವಲಯದ ಉತ್ತಮ ಬೆಳವಣಿಗೆಯಂತಹ ಅಂಶಗಳು ದೇಶಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು. ಐ.ಟಿ., ಹಣಕಾಸು ಮತ್ತು ಲೋಹ ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ಸೂಚ್ಯಂಕಗಳು ಏರಿಕೆ ಕಂಡವು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ADVERTISEMENT

ಏಷ್ಯಾದಲ್ಲಿ ಶಾಂಘೈ ಮತ್ತು ಟೋಕಿಯೊ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ ಮತ್ತು ಸೋಲ್‌ನಲ್ಲಿ ವಹಿವಾಟು ಸಕಾರಾತ್ಮಕ ಅಂತ್ಯ ಕಂಡಿದೆ.

ಹೂಡಿಕೆದಾರರ ಸಂಪತ್ತು ವೃದ್ಧಿ: ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 5.35 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 262.52 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.