ADVERTISEMENT

ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್‌, ನಿಫ್ಟಿ

ವಾಯಿದಾ ವಹಿವಾಟು, ವಿದೇಶಿ ಬಂಡವಾಳ ಹೊರಹರಿವು ಪರಿಣಾಮ

ಪಿಟಿಐ
Published 25 ಜನವರಿ 2023, 22:30 IST
Last Updated 25 ಜನವರಿ 2023, 22:30 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳು ಬುಧವಾರ ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ದೇಶಿ ಷೇರುಪೇಟೆಗಳು ಶೇಕಡ 1ಕ್ಕೂ ಹೆಚ್ಚಿನ ನಷ್ಟ ಕಾಣುವಂತಾಯಿತು.

ಸರ್ಕಾರಿ ಬಾಂಡ್‌ಗಳ ಜನವರಿ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯ ಆಗಲಿರುವುದು ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 773 ಅಂಶ ಕುಸಿತ ಕಂಡು 60,205 ಅಂಶಗಳಿಗೆ ತಲುಪಿತು. ದಿನದ ವಹಿವಾಟು ನಿಧಾನಗತಿಯಲ್ಲಿ ಆರಂಭ ಆಯಿತು, ಒಂದು ಹಂತದಲ್ಲಿ 900 ಅಂಶಗಳವರೆಗೆ ಕುಸಿತ ಕಂಡು ದಿನದ ಕನಿಷ್ಠ ಮಟ್ಟವಾದ 60,081 ಅಂಶಗಳಿಗೆ ತಲುಪಿತ್ತು. ಆ ಬಳಿಕ ಇಳಿಕೆ ಪ್ರಮಾಣ ತುಸು ಕಡಿಮೆ ಆಯಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 226 ಅಂಶ ಇಳಿಕೆ ಕಂಡು 17,892 ಅಂಶಗಳಿಗೆ ತಲುಪಿತು.

‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟಕ್ಕೆ ಒತ್ತು ನೀಡಿದ್ದರಿಂದ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು. ಜಾಗತಿಕ ಆರ್ಥಿಕ ಬೆಳವಣಿಗೆಯ ದುರ್ಬಲ ಆಗಿರಲಿದೆ ಎನ್ನುವ ಮುನ್ನೋಟವು ಆರ್ಥಿಕ ಹಿಂಜರಿತದ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಾಣುವಂತಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.52ರಷ್ಟು ಮತ್ತು ಸ್ಮಾಲ್‌ಕ್ಯಾಪ್‌ ಶೇ 0.94ರಷ್ಟು ಇಳಿಕೆ ಕಂಡಿತು. ಬಿಎಸ್‌ಇನಲ್ಲಿ ವಲಯವಾರು ವಿದ್ಯುತ್‌ ಶೇ 2.72, ಯುಟಿಲಿಟಿ ಶೇ 2.87, ಬ್ಯಾಂಕಿಂಗ್‌ ಶೇ 2.42, ಹಣಕಾಸು ಸೇವೆಗಳು ಶೆ 2.11ರಷ್ಟು ಇಳಿಕೆ ಕಂಡವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.31ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 85.86 ಡಾಲರ್‌ಗೆ ತಲುಪಿತು.

ಷೇರುಪೇಟೆಯಲ್ಲಿ ಇರುವ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರದ ವಹಿವಾಟಿನಲ್ಲಿ ₹ 2,394 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.