ADVERTISEMENT

ರೇಷ್ಮೆಗೂಡು ದರ ಕುಸಿತ: ಬೆಳೆಗಾರರು ಕಂಗಾಲು

ರಾಮನಗರ ಮಾರುಕಟ್ಟೆಯಲ್ಲಿ ಹೆಚ್ಚಿದ ಆವಕ; ಆರಂಭವಾಗದ ನೂಲು ಬಿಚ್ಚಣೆ ಘಟಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 19:44 IST
Last Updated 10 ಜುಲೈ 2018, 19:44 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬಿಳಿಗೂಡು ಬಿಡಿಸುತ್ತಿರುವುದು
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬಿಳಿಗೂಡು ಬಿಡಿಸುತ್ತಿರುವುದು   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಏಕಾ–ಏಕಿ ರೇಷ್ಮೆಯ ಬಿಳಿಗೂಡು (ಬೈವೋಲ್ಟೇನ್‌) ದರ ಕುಸಿದಿರುವುದರಿಂದ ಬೆಳೆಗಾರರು ತೀವ್ರ ಆತಂಕಕ್ಕೀಡಾಗಿದ್ದಾರೆ.

‘ಒಂದು ತಿಂಗಳಿನಿಂದ ಗೂಡಿನ ದರ ಕುಸಿತ ಆರಂಭವಾಗಿದೆ. ಕಳೆದ ತಿಂಗಳ ದರಕ್ಕೆ ಹೋಲಿಸಿದರೆ ಶೇ 40ರಿಂದ 50ರಷ್ಟು ಕುಸಿತವಾಗಿದೆ. ಇದರಿಂದ ಬೆಳೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಸಮಸ್ಯೆ ಮುಂದುವರಿದರೆ ನಮಗೆ ನಷ್ಟ ಕಟ್ಟಿಟ್ಟ ಬುತ್ತಿ’ ಎಂದು ಬೆಳೆಗಾರರಾದ ನಾಗರಾಜ್‌, ಮಂಜುನಾಥ ಅಳಲು ತೋಡಿಕೊಂಡರು.

‘ಕಳೆದ ತಿಂಗಳು ಬಿಳಿಗೂಡಿನ ದರ ಒಂದು ಕೆ.ಜಿ.ಗೆ ₹ 550 ರಿಂದ ₹ 600 ಇತ್ತು. ಈಗ ಏಕಾಏಕಿ ₹ 350ರಿಂದ ₹ 380ಕ್ಕೆ ಕುಸಿದಿದೆ. ಕಳೆದ ವಾರ ₹ 300ರ ಆಸುಪಾಸಿನಲ್ಲಿತ್ತು’ ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ವಿಶ್ವನಾಥ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ರೇಷ್ಮೆಗೂಡು ಉತ್ಪಾದನೆ ಹೆಚ್ಚಳ ಹಾಗೂ ಮಳೆ ಬೀಳುತ್ತಿರುವುದರಿಂದ ಗುಣಮಟ್ಟ ಮತ್ತು ಒಣಗೂಡು ಬಾರದಿರುವುದರಿಂದ ದರ ಕುಸಿದಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಚಿತ್ರದುರ್ಗ, ಶಿರಾ, ರಾಮನಗರ, ಮೈಸೂರು ಭಾಗದಲ್ಲಿ ರೇಷ್ಮೆ ನಾಟಿ ಹೆಚ್ಚಾಗಿದೆ. ಚಿತ್ರದುರ್ಗ ಹಾಗೂ ಶಿರಾ ತಾಲ್ಲೂಕಿನಲ್ಲಿ ತಲಾ 400 ಎಕರೆ ಹೆಚ್ಚಳವಾಗಿದೆ. ಇಳುವರಿ ಈಗ ಆರಂಭವಾಗಿದೆ. ಪರಿಣಾಮ ಹೆಚ್ಚು ಗೂಡು ರಾಮನಗರ ಮಾರುಕಟ್ಟೆಗೆ ಹೋಗುತ್ತಿದೆ’ ಎಂದು ತಿಳಿಸಿದರು.

‘ರಾಮನಗರ ಮಾರುಕಟ್ಟೆಗೆ ನಿತ್ಯ 20 ಟನ್‌ ಗೂಡು ಆವಕವಾಗುತ್ತಿತ್ತು. ಈಗ ಇದರ ಪ್ರಮಾಣ 25 ಟನ್‌ಗೆ ಏರಿಕೆಯಾಗಿದೆ. ನಮ್ಮ ರಾಜ್ಯದ ಜತೆಗೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದ ಗೂಡು ಸಹ ಇದೇ ಮಾರುಕಟ್ಟೆಗೆ ಬರುತ್ತಿದೆ. ‘ಆಟೊಮ್ಯಾಟಿಕ್‌ ರೀಲಿಂಗ್‌’ಗೆ ಅಳವಡಿಸಲು ಬೇಕಾದ ಗುಣಮಟ್ಟದ ಗೂಡು ಬರುತ್ತಿಲ್ಲ. ಹೀಗಾಗಿ ನೂಲು ತಯಾರಕರು ಗೂಡು ಖರೀದಿಸಲು ಮುಂದೆ ಬರುತ್ತಿಲ್ಲ. ಇದೂ ಸಹ ದರ ಕುಸಿತಕ್ಕೆ ಕಾರಣ’ ಎಂದು ಅವರು ವಿಶ್ಲೇಷಿಸಿದರು.

ರಾಜ್ಯದಲ್ಲಿ ಒಟ್ಟು 36 ನೂಲು ತೆಗೆಯುವ ಘಟಕಗಳಿಗೆ ಮಂಜೂರಾತಿ ಇದೆ. ಪ್ರತಿ ಘಟಕಕ್ಕೆ 600– 1000 ಕೆ.ಜಿ ಗೂಡು ಬೇಕಾಗುತ್ತದೆ. ಈವರೆಗೆ ಘಟಕಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದೇ ಇರುವುದರಿಂದ ಗೂಡಿನ ಬೇಡಿಕೆ ತಗ್ಗಿದೆ. ಈ ಘಟಕಗಳು ಆರಂಭವಾದರೆ ಈಗ ಉತ್ಪಾದನೆಯಾಗುತ್ತಿರುವ ಗೂಡು ಘಟಕಗಳಿಗೆ ಪೂರೈಸಲು ಕಡಿಮೆ ಬೀಳುತ್ತದೆ. ಆಗ ಸಹಜವಾಗಿಯೇ ದರದಲ್ಲಿ ಏರಿಕೆಯಾಗುತ್ತದೆ ಎಂದು ಅವರು ಹೇಳಿದರು.

ಈಗಿನ ದರ ಕುಸಿತ ಶಾಶ್ವತವಲ್ಲ. ಘಟಕಗಳ ಆರಂಭ ಹಾಗೂ ಮಳೆ ನಿಂತರೆ ದರ ಚೇತರಿಕೆಯಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎನ್ನುವಾರೆ ವಿಶ್ವನಾಥ್‌.

* ಸರ್ಕಾರ ಎಲ್ಲ ನೂಲು ಉತ್ಪಾದನಾ ಘಟಕಗಳ ಆರಂಭಕ್ಕೆ ಕ್ರಮ ಕೈಗೊಂಡು ಬೆಳೆಗಾರರ ನೆರವಿಗೆ ಬರಬೇಕು

–ಎಸ್‌.ಕೆ. ಗುರುಲಿಂಗಪ್ಪ, ರೇಷ್ಮೆ ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ

* ರೈತರು ದಾಳಿಂಬೆಗೆ ಪರ್ಯಾಯವಾಗಿ ರೇಷ್ಮೆ ಕೃಷಿಯತ್ತ ವಾಲುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗಣನೀಯವಾಗಿ ರೇಷ್ಮೆ ಕೃಷಿ ಹೆಚ್ಚಳವಾಗುತ್ತಿದೆ

–ವಿಶ್ವನಾಥ್‌, ಉಪ ನಿರ್ದೇಶಕ, ರೇಷ್ಮೆ ಇಲಾಖೆ

ಮುಖ್ಯಾಂಶಗಳು

* ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಶೇ 40ರಿಂದ 50ರಷ್ಟು ಕುಸಿತ

* ಪ್ರತಿ ಕೆಜಿಗೆ ₹ 350ರಿಂದ ₹ 380ಕ್ಕೆ ಕುಸಿದ ಬೆಲೆ

* ಕುಸಿತ ಶಾಶ್ವತವಲ್ಲ; ಆತಂಕಪಡಬೇಕಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.